ಬೆಂಗಳೂರು: ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಿ, ಭಾರತೀಯರೆಲ್ಲರೂ ಬ್ರಿಟೀಷರ ಗುಲಾಮಗಿರಿಯಿಂದ ಸ್ವತಂತ್ರರಾಗಬೇಕೆನ್ನುವ ಹೆಗ್ಗುರಿಯಿಂದ ಹೋರಾಡಿದ ಸುಭಾಷ್ ಚಂದ್ರ ಬೋಸ್‌ರವರು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ನೇತಾಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನ. ದೇಶದ ಬಗ್ಗೆ ಅಪಾರ ಗೌರವಾಭಿಮಾನ ಹೊಂದಿದ್ದ ಮಹಾನ್ ದೇಶಭಕ್ತ. ಈಗಿನ ಐಎಎಸ್ ನಂತೆ ಬ್ರಿಟೀಷರ ಕಾಲದಲ್ಲಿದ್ದ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತಮ್ಮ ಉಜ್ವಲ ಭವಿಷ್ಯವನ್ನು ತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟರು. ಎರಡು ಬಾರಿ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಹಾತ್ಮ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಭಾರತ ಸ್ವಾತಂತ್ರ್ಯ ಹೊಂದುವುದು ಕಷ್ಟಸಾಧ್ಯ ಎಂಬುದು ನೇತಾಜಿಯ ಅಭಿಪ್ರಾಯವಾಗಿತ್ತು. ಆದ್ದರಿಂದ ಶಸ್ತ್ರಾಸ್ತ್ರಗಳನ್ನು ಬಳಸಿಯೇ ಬ್ರಿಟೀಷರನ್ನು ಭಾರತದಿಂದ ಹೊರದೂಡುವ ಉದ್ದೇಶದಿಂದ ಐಎನ್‌ಎ (ಇಂಡಿಯನ್ ನ್ಯಾಷನಲ್ ಆರ್ಮಿ)ಯನ್ನು ಸ್ಥಾಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನ್ಮದಿಂದು ಅವರ ಜೀವನ-ಸಾಧನೆಗಳನ್ನು ಸ್ಮರಿಸುವ ಜೊತೆಗೆ ಅವರ ಆದರ್ಶಗಳ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕಿದೆ ಎಂದರು.