Home ನಮ್ಮ ಜಿಲ್ಲೆ ಕಲಬುರಗಿ ನೀವಿಬ್ಬರು ಜೊತೆಯಾಗಿ ಅಭಿವೃದ್ದಿ ಕೆಲಸ ಮಾಡಿ : ಸಿಎಂ,‌ಡಿಸಿಎಂಗೆ ಖರ್ಗೆ‌ ಸಲಹೆ

ನೀವಿಬ್ಬರು ಜೊತೆಯಾಗಿ ಅಭಿವೃದ್ದಿ ಕೆಲಸ ಮಾಡಿ : ಸಿಎಂ,‌ಡಿಸಿಎಂಗೆ ಖರ್ಗೆ‌ ಸಲಹೆ

0

ಕಲಬುರಗಿ : ಸತತ 16 ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯನವರನ್ನು ಕೊಂಡಾಡಿದ ರಾಜ್ಯಸಭಾ ವಿರೋದ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅತ್ಯಂತ ಉತ್ತಮ ಬಜೆಟ್ ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಡಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಲ್ಯಾಣ ಪಥ ಯೋಜನೆಗೆ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಶನಿವಾರ ಅಡಿಗಲ್ಲು ನೆರವೇರಿಸಿ‌ ಅವರು ಮಾತನಾಡಿದರು.

ಡಿಕೆ ಶಿವಕುಮಾರ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವಿಬ್ಬರು ಜೊತೆಯಾಗಿ ಅಭಿವೃದ್ದಿ ಕೆಲಸ ಮಾಡಿ, ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಸಲಹೆ ನೀಡಿದರು.

ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಪಕ್ಷದ ವರಿಷ್ಠ ಖರ್ಗೆ ಅವರು ಇಬ್ಬರು ಒಂದಾಗಿ ಜೊತೆಗೂಡಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಸಲಹೆ ನೀಡುವುದರ ಜೊತೆಗೆ ಕಟುವಾಗಿ ಎಚ್ಚರಿಕೆ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸ್ಥಾಪನೆಗೆ ಒತ್ತಿ ಹೇಳಿದ ಖರ್ಗೆ, ಬೀದರ್, ಕಲಬುರಗಿ ಹಾಗು ಬಳ್ಳಾರಿಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಗಳಿಲ್ಲ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ಈ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡು ಕೊಡಬೇಕು. ಈ ಮಾತು ಶಿವಕುಮಾರ್ ಅವರಿಗೆ ಯಾಕೆ ಹೇಳುತ್ತಿದ್ದೇನೆ ಎಂದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ ಜೊತೆಯಾಗಿ ಹೋದರೆ ಮಾತ್ರ ನಮ್ಮ ಕೆಲಸ ಆಗುತ್ತದೆ. ಹಳೆ ಮೈಸೂರು ಹಾಗೂ ಮಲೆನಾಡಿನ ಜನರು ಅರ್ಜಿ ಕೊಟ್ಟು ಯಾಕೆ ಕೆಲಸ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಾರೆ. ಆದರೆ, ನಮ್ಮ ಭಾಗದ ಜನರು ಯಾಕೆ ಕೆಲಸ ಆಗಿಲ್ಲ ಎಂದು ಕೈಮುಗಿಯುತ್ತಾರೆ ಅಷ್ಟೊಂದು ಮುಗ್ಧರು. ಅಲ್ಲದೆ ನಿಮಗೆ ಶಕ್ತಿ ತುಂಬಿದ್ದೇ ನಮ್ಮ ಭಾಗದ ಜನರು. ನಿಮಗೆ ಶಕ್ತಿ ತುಂಬಿದವರಿಗೆ ನೀವು ಕೆಲಸ ಮಾಡಿ. ಎಲ್ಲ ಕೆಲಸಗಳನ್ನು ಮೈಸೂರಿನಿಂದ ಪ್ರಾರಂಭ ಮಾಡಬೇಡಿ. ಕಲ್ಯಾಣ ದಿಂದ ಪ್ರಾರಂಭಿಸಿ ನಿಮ್ಮ ಕಲ್ಯಾಣವಾಗುತ್ತದೆ. ಕಲ್ಯಾಣದಿಂದ ಕೆಲಸ ಪ್ರಾರಂಭಿಸಿದರೆ ಅದು ಕೊಳ್ಳೆಗಾಲದವರೆಗೆ ಹೋಗುತ್ತದೆ ಆದರೆ ಮೈಸೂರಿನಿಂದ ಪ್ರಾರಂಭಿಸಿದ ಕೆಲಸ ಬೆಂಗಳೂರಿಗೆ ಬಂದು ನಿಲ್ಲುತ್ತಿದೆ ಎಂದರು.

ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳಿಗೆ ಅದರಲ್ಲೂ ನರೇಗಾ ಯೋಜನೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜನ ಖರ್ಗೆ, ಮಹಾತ್ಮಾ ಗಾಂಧಿ ಹೆಸರಲ್ಲಿ ಪ್ರಾರಂಭಿಸಿದ ಯೋಜನೆಗೂ ಅನುದಾನ ನೀಡುತ್ತಿಲ್ಲ ಎಂದರು.

ಕಳೆದ ಹನ್ನೊಂದು ವರ್ಷದಲ್ಲಿ ಮೋದಿ ಹನ್ನೊಂದು ಬಹಳ ದೊಡ್ಡ ಸುಳ್ಳು ಹೇಳಿದ್ದಾರೆ ಎಂದು ವಿವರವಾಗಿ ಹೇಳಿದ ಖರ್ಗೆ ಅವರು ಪಟ್ಟಿ ಮಾಡಿದರು.

1)ಹದಿನೈದು ಲಕ್ಷ ಕಪ್ಪುಹಣ ವಾಪಸ್ ತರುತ್ತೇನೆ ಎಂದಿದ್ದರು, ತರಲಿಲ್ಲ.2) ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ಎಲ್ಲಿ ಉದ್ಯೋಗ.? 3) ಪೆಟ್ರೋಲ್ ಡಿಸೇಲ್ ದರ ಇಳಿಕೆ ಮಾಡುವುದಾಗಿ ಹೇಳಿದ್ದರು, ನಮ್ಮ ಸರ್ಕಾರದಲ್ಲಿದ್ದ ಬೆಲೆಗಿಂತ ಜಾಸ್ತಿ ಮಾಡಿದ್ದಾರೆ. 4) 2022 ರಲ್ಲಿ ಗಂಗಾ ನದಿ ಸ್ವಚ್ಛೀಕರಣ ಮಾಡುವುದಾಗಿ ಹೇಳಿದ್ದರು, ಎಲ್ಲಿ ಮಾಡಿದರ? 5) ಮೇಕ್ ಇನ್
ಇಂಡಿಯಾ ಅಡಿಯಲ್ಲಿ ಉತ್ಪಾದನಾ ಕ್ಷೇತ್ರದ ಅಡಿಯಲ್ಲಿ ನೌಕರಿ ಏನಾಯ್ತು ? 6) 2022.ರಲ್ಲಿ ಎಲ್ಲ ಭಾರತೀಯರಿಗೆ ಪಕ್ಕಾ ಮನೆ ಕಟ್ಟಿಸುವುದಾಗಿ ಹೇಳಿದ್ದರು, ಪಕ್ಕಾ ಇರಲಿ ಅದರಲ್ಲಿ ಅರ್ಧ ಮನೆಯೂ ಆಗಿಲ್ಲ. 7)ರೈತರ ಲಾಭ ದ್ವಿಗುಣಗೊಳಿಸುವುದಾಗಿ ಹೇಳಿದ್ದರು, ಆಗಿದೆಯಾ? . 8) ನೋಟ್ ಬಂಧಿ ಮಾಡಿದ ಸಂಧರ್ಭಗಳಲ್ಲಿ ನೀಡಿದ ಮಾತು ಮರೆತರು. 9) ಅಹಮದಬಾದ್ನಿಂದ‌ ಮುಂಬೈವರೆಗೆ 2022 ರಲ್ಲಿ ಬುಲೆಟ್ ಟ್ರೇನ್ ಪ್ರಾರಂಭಿಸುವುದಾಗಿ ಹೇಳಿದರು,ಆಯ್ತಾ ? 10) ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಲಾಭ ಆಗಲಿಲ್ಲ.11) ದೇಶದ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಓಡಿ ಹೋದವರನ್ನು ಹಿಡಿದು ತರಲಿಲ್ಲ..ಇಷ್ಟಾದರೂ ಕೂಡಾ ಯುವಕರು ಮೋದಿಯನ್ನು ಯಾಕೆಬೆಂಬಲಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ನಾನು ಹನ್ನೊಂದು ಚುನಾವಣೆ ಗೆದ್ದಿದ್ದೇನೆ ಆದರೆ ಸುಳ್ಳು ಆಡಿಲ್ಲ. ಹಾಗಾಗಿ, ನನ್ನನ್ನ ಆಶೀರ್ವಾದ ಮಾಡಿದ್ದಾರೆ ಎಂದರು

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ್ ಪಾಟೀಲ್, ರಹೀಮ್ ಖಾನ್, ಎಂಪಿ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ ವೈ ಪಾಟೀಲ, ಬಿ.ಆರ್.ಪಾಟೀಲ, ಅಜಯ್ ಸಿಂಗ್, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಅಲ್ಲಮಪ್ರಭು ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಶರಣು ಸಲಗಾರ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಎ. ವಸಂತ ಕುಮಾರ ಸೇರಿದಂತೆ ಹಲವರಿದ್ದರು.

Exit mobile version