Home News ದಯಾಮರಣಕ್ಕಾಗಿ ಗುತ್ತಿಗೆದಾರ ಮನವಿ

ದಯಾಮರಣಕ್ಕಾಗಿ ಗುತ್ತಿಗೆದಾರ ಮನವಿ

ವಿಜಯಪುರ: ಕೈಗೊಂಡ ಕಾಮಗಾರಿಗಳ ಹಣ ಪಾವತಿಗಾಗಿ ಅನೇಕ ರೀತಿಯ ತೊಂದರೆ ಎದುರಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗುತ್ತಿಗೆದಾರರ ಹಲವು ಪ್ರಕರಣಗಳು ವರದಿಯಾಗುತ್ತಿವೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಸ್ಪಂದನೆ ದೊರಕುತ್ತಿಲ್ಲ ಎಂದು ದೂರಿ ವಿಜಯಪುರದ ಗುತ್ತಿಗೆದಾರ ಪ್ರಭು ಮಲ್ಲಿಕಾರ್ಜುನಮಠ ಅವರು ಸಿಇಒ ಅವರನ್ನು ಭೇಟಿ ಮಾಡಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳ ಅನುಮತಿ ಪತ್ರಕ್ಕೆ ಶಿಫಾರಸ್ಸು ಮಾಡುವಂತೆ ಲಿಖಿತ ಮನವಿ ಸಲ್ಲಿಸಿದ ಘಟನೆ ನಡೆದಿದೆ.
ನನ್ನ ಸಮಸ್ಯೆಯನ್ನು ಬಗೆಹರಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ಕಲ್ಪಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿ ಎಂದು ತಮ್ಮ ಸಂದೇಶದಲ್ಲಿ ಬರೆದಿದ್ದಾರೆ.
ಸಿಇಒ ರಿಷಿ ಆನಂದ ಅವರಿಗೆ ಸಲ್ಲಿಸಿರುವ ಸುದೀರ್ಘವಾದ ಮನವಿ ಪತ್ರದಲ್ಲಿ ಪ್ರಭು ಮಲ್ಲಿಕಾರ್ಜುನಮಠ ತಮ್ಮ ಸಮಸ್ಯೆಯನ್ನು ಉಲ್ಲೇಖಿಸಿ ಪಿಡಬ್ಲೂಡಿ ಇಲಾಖೆಯ ಇ.ಇ. ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ. ಚಿಕ್ಕಲಗಿ, ಅಕೌಂಟೆಂಟ್ ಆನಂದ ಬಿರಾದಾರ ಅವರಿಂದ ಸ್ಪಂದನೆ ದೊರಕುತ್ತಿಲ್ಲ, ಐದು ವರ್ಷದ ಹಿಂದೆ ಕೆಲಸ ಮಾಡಿದ ಹಾಗೂ ಎರಡು ವರ್ಷಗಳ ಹಿಂದೆ ಕಾಮಗಾರಿ ಕೈಗೊಂಡ ಬಿಲ್‌ಗಳನ್ನು ಜೇಷ್ಠತೆಯ ಪಟ್ಟಿಯನ್ನು ಬಿಟ್ಟು ತಮ್ಮ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿಯಗಿ ವಿತರಿಸುತ್ತಿದ್ದಾರೆ, ಸಕಾಲಕ್ಕೆ ಬಿಲ್ ಬಾರದೇ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ.
ಬಸವೇಶ್ವರ ಭವನದಿಂದ ಕನಸೆಕಾಲೋನಿಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು ಹಣದ ಅವಶ್ಯಕತೆ ಇದೆ, ಆದರೆ ಇಲಾಖೆಯಿಂದಲೇ ಸ್ಪಂದನೆ ದೊರಕುತ್ತಿಲ್ಲ. ಸೇವಾ ನಿವೃತ್ತಿಯಾಗಲಿರುವ ಸಿ.ಬಿ. ಚಿಕ್ಕಲಕಿ ಅವರು ಯಾರೂ ಏನೂ ಮಾಡುವುದಿಲ್ಲ ಎಂದು ದರ್ಪದ ಮಾತು ಆಡುತ್ತಿದ್ದಾರೆ, ಹೀಗಾಗಿ ಕೂಡಲೇ ಅವರ ನಿವೃತ್ತಿ ವೇತನವನ್ನು ತಡೆ ಹಿಡಿಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Exit mobile version