Home ತಾಜಾ ಸುದ್ದಿ ತ್ವರಿತ ನ್ಯಾಯದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ

ತ್ವರಿತ ನ್ಯಾಯದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ

0

ದಾವಣಗೆರೆ: ದಾಖಲಾಗುವ ಅಪರಾಧ ಪ್ರಕರಣಗಳಿಗೆ ತ್ವರಿತವಾಗಿ ನ್ಯಾಯ ಒದಗಿಸಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ಬಲಿಷ್ಠಗೊಳ್ಳಬೇಕಾಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅಭಿಪ್ರಾಯಪಟ್ಟರು.
ನಗರದ ಡಿ.ದೇವರಾಜ ಅರಸು ಬಡಾವಣೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಶನಿವಾರ ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ಆರಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಗಳು ಅಭಿವೃದ್ಧಿ ಮಾಡದಿದ್ದರೂ ನಡೆಯುತ್ತದೆ. ಆದರೆ ಜನರಿಗೆ ನ್ಯಾಯ ಕೊಡುವ, ಶೀಘ್ರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವ, ಒಳ್ಳೆಯ ಕೆಲಸಕ್ಕೆ ಅನುಗುಣವಾಗಿ ಉತ್ತೇಜನ ಮತ್ತು ಪ್ರೋತ್ಸಾಹಿಸಿದರೆ ಸಾಕು, ಪ್ರಗತಿ, ಅಭಿವೃದ್ಧಿ ಆಗುತ್ತದೆ ಎಂದರು.
ಶಿವಾಜಿ ಕಾಲಕ್ಕಿರಬಹುದು, ಅಶೋಕ ಚಕ್ರಮರ್ತಿ ಕಾಲಕ್ಕಿರಬಹುದು, ಅಕ್ಬರ್ ಚಕ್ರವರ್ತಿ ಕಾಲಕ್ಕಿರಬಹುದು ಅಥವಾ ಎಲ್ಲಾ ಮಹಾರಾಜರ ಕಾಲಕ್ಕಿರಬಹುದು. ಸರ್ಕಾರಗಳ
ಕಾಲವಿರಬಹುದು. ಎಲ್ಲವೂ ಒಂದೇ ಕಾರಣವೇನೆಂದರೆ ನ್ಯಾಯ ನೀಡುವುದು, ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಮಾಡುವುದಾಗಿತ್ತು. ಈಗಾಗಲಾದರೂ ಸರ್ಕಾರಗಳು
ಎಚ್ಚೆತ್ತುಕೊಂಡು ತ್ವರಿತ ನ್ಯಾಯ, ಜನಸಾಮಾನ್ಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ಯಾವುದೇ ಒಬ್ಬ ಅಪರಾಧ ಮಾಡಿದರೆ, ಯಾವುದೇ ಒಬ್ಬ ತಪ್ಪು ಮಾಡಿದರೆ, ಆ ತಪ್ಪಿಗೆ ಅನುಗುಣವಾಗಿ ತ್ವರಿತವಾಗಿ ಶಿಕ್ಷೆ ಆಗಬೇಕು. ಎರಡು ವರ್ಷದಲ್ಲಿ ಅದು ಜಾರಿಯಾಗಬೇಕು. ೧೦ ವರ್ಷ, ೩೦ ವರ್ಷ, ೫೦ ವರ್ಷ ಅದನ್ನು ಎಳೆದುಕೊಂಡು ಹೋದರೆ ಅದು ಶಿಕ್ಷೆಯಲ್ಲ, ಅದು ನ್ಯಾಯ ವ್ಯವಸ್ಥೆಯಲ್ಲ, ಅದು ಅನ್ಯಾಯದ ಕೂಪವಾಗುತ್ತದೆ ಎಂದರು.
ಏಕೆಂದರೆ ಒಳ್ಳೆಯವರಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಯಾವುದೇ ಪ್ರಕರಣಗಳಿದ್ದರೂ ಎರಡು ವರ್ಷದಲ್ಲಿ ಇತ್ಯರ್ಥವಾಗಬೇಕು. ಅವನು ತಪ್ಪಿತಸ್ಥ ಎಂದು ನಿರ್ಧಾರವಾದರೆ ಅವನಿಗೆ ಶಿಕ್ಷೆ ಆಗಬೇಕು. ನಿರ್ದೂಷಿಯಾದರೆ ಅವನು ಬಿಡುಗಡೆ ಆಗಬೇಕು. ಬೆಂಗಳೂರಿನಲ್ಲಿ 2008 ಮತ್ತು 2010ರಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಿವಿ. ಇವತ್ತಿಗೆ 16 ವರ್ಷ ಆಗಿದೆ. ತನಿಖಾ ಅಧಿಕಾರಿ ಮೃತಪಟ್ಟಿದ್ದಾರೆ. ಆದರೆ ಆರೋಪಿಗಳ ವಿರುದ್ಧ ಕೋರ್ಟ್‌ನಲ್ಲಿ ಜಡ್ಜ್ಮೆಂಟ್ ಆಗಿಲ್ಲ. ಈ ರೀತಿಯಾದರೆ ಯಾರಿಗೂ ಪ್ರಯೋಜನವಿಲ್ಲ ಎಂದರು.
ಸಮಾಜದಲ್ಲಿ ನಡೆಯುವ ಅಪರಾಧ ಸಂಖ್ಯೆಗಳು ಕಡಿಮೆ ಆಗಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಲೀಸ್ ಇಲಾಖೆಗೆ ಹೆಚ್ಚಿನ ಬಲ ನೀಡಬೇಕಾಗಿದೆ. ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕಾಗಿದೆ ಎಂದರು.

Exit mobile version