ಸಂ. ಕ. ಸಮಾಚಾರ, ಮಂಗಳೂರು: ತಾಯಿಯ ತೋಳನ್ನು ಬಿಗಿದಪ್ಪಿಕೊಂಡ ಆ ಮಗು ರಕ್ಷಣೆಗಾಗಿ ಕೂಗಿದರೂ ಮಗುವಿನ ಪ್ರಾಣ ಉಳಿಸಲಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಂಜನಾಡಿ ಗ್ರಾಮದ ಉರುಮನೆ ಮದಪಾಡಿಯಲ್ಲಿ ಶುಕ್ರವಾರ ಮುಂಜಾನೆ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಮೂವರು ಪ್ರಾಣ ಬಿಟ್ಟ ದುರಂತ ಸ್ಥಳದ ಈ ಮನಕಲಕುವ ದೃಶ್ಯ ಅಲ್ಲಿದ್ದವರ ಕಣ್ಣಲ್ಲಿ ನೀರು ಬರಿಸಿತ್ತು.
ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಂದು ಮಗು ಪ್ರಜ್ಞಾನಹೀನ ಸ್ಥಿತಿಯಲ್ಲಿತ್ತು, ಪ್ರಜ್ಞೆ ಬರುತ್ತಿದ್ದಂತೆ ತನ್ನ ತಾಯಿಯ ತೋಳನ್ನು ಬಿಗಿದಪ್ಪಿಕೊಂಡ ಆ ಮಗು ರಕ್ಷಣೆಗಾಗಿ ಚೀರಾಡುತ್ತಿತ್ತು. ಎನ್‌ಡಿಆರ್‌ಎಫ್ ತಂಡಗಳು ಸತತ ಒಂಭತ್ತ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತಾಯಿ ಅಶ್ವಿನಿ, ಮಗು ಆರುಷ್ ಇಬ್ಬರನ್ನೂ ರಕ್ಷಣೆ ಮಾಡಿದವು. ಆದರೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿದೆ.
ಘಟನೆಯ ವಿವರ: ಮುಂಜಾನೆ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದಿತ್ತು. ತೋಟದ ನಡುವಿರುವ ಮನೆಯ ಮೇಲೆ ಬೃಹತ್ ಮರ ಸಹಿತ ಸುಮಾರು ೩೦ ಅಡಿ ಎತ್ತರದ ಧರೆ ಕುಸಿದು ಬಿದ್ದಿತ್ತು. ಶುಕ್ರವಾರ ಮುಂಜಾನೆ ಸುಮಾರು ೪ ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ವೇಳೆ ಮನೆ ಯಜಮಾನ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ, ಪುತ್ರ ಸೀತಾರಾಮ ಮತ್ತು ಅವರ ಪತ್ನಿ ಅಶ್ವಿನಿ ಮಕ್ಕಳಾದ ಆರುಷ್, ಆರ್ಯನ್ ಮಲಗಿದ್ದರು. ಸೀತಾರಾಮ ಮನೆಯಿಂದ ಹೊರಬರಲು ಯಶಸ್ವಿಯಾದರು.
ಪ್ರೇಮಾ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಮೃತದೇಹವೂ ಮಣ್ಣಿನಡಿಯಲ್ಲೇ ಇದೆ. ಕಾಂತಪ್ಪ ಪೂಜಾರಿ ಅವರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ. ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ (೫೪ ) ಮಕ್ಕಳಾದ ಮೂರು ವರ್ಷದ ಮಗು ಆರ್ಯನ್, ಎರಡು ವರ್ಷ ಪ್ರಾಯದ ಆರುಷ್ ಮೃತಪಟ್ಟಿದ್ದಾರೆ.
ಕಾರ್ಯಾಚರಣೆ: ಧಾರಾಕಾರ ಮಳೆಯ ನಡುವೆಯೂ ರಕ್ಷಣಾ ತಂಡಗಳು ಶ್ರಮ ಪಟ್ಟು ಕಾರ್ಯಾಚರಣೆ ನಡೆಸಿದೆ. ಅವಶೇಷಗಳಡಿ ಸಿಲುಕಿದ್ದ ತಾಯಿ, ಮಕ್ಕಳಿಗೆ ಉಸಿರಾಟಕ್ಕೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯರು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸುದೀರ್ಘ ಒಂಬತ್ತು ಗಂಟೆಗಳ ಕಾಲ ಹರಸಾಹಸ ಪಟ್ಟರೂ ಇಬ್ಬರು ಕಂದಮ್ಮಗಳನ್ನ ಮಾತ್ರ ಉಳಿಸಲಿಕ್ಕಾಗಲಿಲ್ಲ. ಬೆಳಗ್ಗೆ ೧೧ ಗಂಟೆ ವೇಳೆಗೆ ಮಕ್ಕಳು ಅವಶೇಷಗಳ ಎಡೆಯಿಂದ ಒದ್ದಾಟ, ಚೀರಾಟ ಮಾಡುತ್ತಿದ್ದರೂ ಅವರನ್ನು ರಕ್ಷಣಾ ತಂಡಕ್ಕೆ ತೆರವು ಮಾಡಲು ಸಾಧ್ಯವಾಗಲಿಲ್ಲ. ಮಕ್ಕಳು ಚೀರಾಡುತ್ತಿದ್ದುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಎನ್‌ಡಿಆರ್‌ಎಫ್ ತಂಡದಲ್ಲಿ ನುರಿತ ಮಂದಿ ಇರುತ್ತಾರೆ. ಕಣ್ಣಿನ ಎದುರಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದರೂ ಮಕ್ಕಳನ್ನು ಹೊರತೆಗೆಯಲು ಸಾಧ್ಯವಾಗದಿರುವುದು ವಿಷಾದನೀಯ.