Home ಅಪರಾಧ ಜೀವ ಬೆದರಿಕೆ ಇಬ್ಬರ ಸೆರೆ

ಜೀವ ಬೆದರಿಕೆ ಇಬ್ಬರ ಸೆರೆ

0

ಮಂಗಳೂರು: ಹಲ್ಲೆ, ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಘನ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳದ ಫರಂಗಿಪೇಟೆ ಕೊಡಿಮಜಲು ಹೌಸ್ ನಿವಾಸಿ ಮೊಹಮ್ಮದ್ ಅತಾವುಲ್ಲಾ(೪೦), ಬಂಟ್ವಾಳದ ಫರಂಗಿಪೇಟೆ ಕುಂಜತ್ಕಲ್ ಹೌಸ್ ನಿವಾಸಿ ತೌಸೀರ್ ಅಲಿಯಾಸ್ ಪತ್ತೊಂಜಿ ತೌಚಿ(೩೧) ದಸ್ತಗಿರಿ ಮಾಡಿದ ಆರೋಪಿಗಳು.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಬ್ರಿಡ್ಜ್ ಬಳಿ ಕ್ಯಾಥೋಲಿಕ ಸಭಾಭವನ ವತಿಯಿಂದ ಅ. ೫ರಂದು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಆಲ್ವಿನ್ ಜೆರೋಮ್ ಡಿಸೋಜಾ ಎಂಬವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: ೩೫೨, ೧೧೫(೨), ೩೫೧(೨), ೧೦೯ ಜೊತೆಗೆ ೩(೫) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿ ಮೊಹಮ್ಮದ್ ಅತಾವುಲ್ಲಾ ಎಂಬಾತನನ್ನು ಅ. ೭ರಂದು, ಆರೋಪಿ ತೌಸೀರ್ ಎಂಬಾತನನ್ನು ಅ. ೮ರಂದು ದಸ್ತಗಿರಿ ಮಾಡಲಾಯಿತು.
ದಸ್ತಗಿರಿ ಮಾಡಲಾದ ಆರೋಪಿತರ ಪೈಕಿ ಮಹಮದ್ ಅತಾವುಲ್ಲಾ ಎಂಬಾತನು ಘಟನಾ ಸಮಯದಲ್ಲಿ ದೂರುದಾರರಿಗೆ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಚೋದನೆ ನೀಡಿದ್ದು ಹಾಗೂ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ ಪ್ರಮುಖ ಆರೋಪಿ ತೌಸಿರ್ ಯಾನೆ ಪತ್ತೊಂಜಿ ತೌಸಿರ್‌ನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿದೆ.

Exit mobile version