Home ನಮ್ಮ ಜಿಲ್ಲೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ತೊಗರಿ ಬೆಳೆ ಸುರಿದು ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ತೊಗರಿ ಬೆಳೆ ಸುರಿದು ಪ್ರತಿಭಟನೆ

0

ತೊಗರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ತೇವಾಂಶ ಕೊರತೆಯಿಂದ ಒಣಗಿರುವ ತೊಗರಿ ಬೆಳೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ, ದಲಿತ, ರೈತರ, ಕಾರ್ಮಿಕರ, ಕನ್ನಡ ಪರ ಮತ್ತು ಪ್ರಗತಿಪರ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಎದುರು ತೊಗರಿ ಬೆಳೆ ಸುರಿದು ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಜಿಲ್ಲೆಯಲ್ಲಿ ೬ ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಸುಮಾರು ೨ ಲಕ್ಷ ಹೆಕ್ಟೇರ್ ತೊಗರಿ ತೇವಾಂಶ ಕೊರತೆಯಿಂದ ನೆಟೆರೋಗ, ಒಣಗು ರೋಗ ತಗುಲಿ ಸಂಪೂರ್ಣ ಹಾಳಾಗಿದೆ. ಜಿಐ ಮಾನ್ಯತೆ ಸಿಕ್ಕರೂ ಸಹ ತೊಗರಿ ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ವಿಶೇಷವಾಗಿ ತೊಗರಿ ಬೆಳೆಗೆ ವಿಶೇಷ ಪ್ಯಾಕೇಜ್ ನೀಡಿ, ಬೆಳೆ ವಿಮೆ ಮಂಜೂರು ಮಾಡಬೇಕು. ಎಂಎಸ್‌ಪಿ ಬೆಂಬಲ ಬೆಲೆಯೊಂದಿಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಸಾವಿರ ರೂ. ಪ್ರೋತ್ಸಾಹ ನೀಡಬೇಕು. ಮುಖ್ಯಮಂತ್ರಿಗಳ ಆವರ್ಥನಿಧಿಯಿಂದ ೫೦೦ ಕೋಟಿ ರೂ. ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ತೊಗರಿ ಬೆಳೆಗಾರರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ದಿ.೨೨ ರಂದು ಕಲಬುರಗಿ ಬಂದ್ ಕರೆ ನೀಡಬೇಕಾಗುತ್ತದೆ ಎಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ರೈತ ಮುಖಂಡರಾದ ಶರಣಬಸಪ್ಪ ಮಮ್ಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಬಸವರಾಜ ಇಂಗಿನ, ಉಮಾಪತಿ ಪಾಟೀಲ್, ಎಸ್.ಆರ್. ಕೊಲ್ಲೂರ್, ಮಹಾಂತೇಶ ಜಮಾದಾರ್, ಎಸ್.ಬಿ. ಮಹೇಶ, ಎಂ.ಬಿ. ಸಜ್ಜನ, ನಾಗೇಂದ್ರಪ್ಪ ಥಂಬೆ, ಮೊಬಿನ್ ಅಹ್ಮದ್, ಸಲೀಂ ಅಹ್ಮದ್ ಚಿತ್ತಾಪುರಿ, ಮೇಘರಾಜ್ ಕಠಾರೆ ಸೇರಿ ಅನೇಕರು ಎಚ್ಚರಿಸಿದ್ದಾರೆ.

Exit mobile version