ಬೆಂಗಳೂರು: ಜಯದೇವ ಆಸ್ಪತ್ರೆಯು ಬರುವ ಸೆಪ್ಟೆಂಬರ್ 17 ಕ್ಕೆ ಅನಾವರಣಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕಲಬುರಗಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಇಂದು ಭೇಟಿ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ಜಯದೇವ ಹೃದ್ರೋಗ ಆಸ್ಪತ್ರೆಯು ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಜನಜನಿತವಾಗಿದೆ. ಆರೋಗ್ಯ ಹಿತದೃಷ್ಟಿಯಿಂದ, ಹೃದಯ ಸಂಬಂಧಿ ಕಾಯಿಲೆಗೆ ಸೂಕ್ತ ಚಿಕಿತ್ಸೆಗಾಗಿ ನಿರ್ಮಿಸಲಾದ ಜಯದೇವ ಆಸ್ಪತ್ರೆಯು ಬರುವ ಸೆಪ್ಟೆಂಬರ್ 17 ಕ್ಕೆ ಅನಾವರಣಗೊಳ್ಳಲಿದೆ. ಕಾಂಗ್ರೆಸ್ ಸರಕಾರದ ಪ್ರಮುಖ ಪ್ರಣಾಳಿಕೆಗಳಾದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವ, ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಸಂಖ್ಯಾತ ಯೋಜನೆಗಳನ್ನು ಕೈಗೊಳ್ಳಲಿದ್ದೇವೆ. ಜಯದೇವ ಹೃದ್ರೋಗ ಸಂಸ್ಥೆಯು ಜನರೊಳಗೆ ಬೆರತ ಸಂಸ್ಥೆಯಾಗಿ ರೂಪುಗೊಂಡಿದೆ. ನೂತನ ಆಸ್ಪತ್ರೆಯು ಅದೇ ದಿಕ್ಕಿನಲ್ಲಿ ಸಾಗುವ ಭರವಸೆಯಿದೆ ಎಂದಿದ್ದಾರೆ