Home ತಾಜಾ ಸುದ್ದಿ ಜನರ ಆಕ್ರೋಶ ಪ್ರಗತಿಪರ ಕಾಂಗ್ರೆಸ್ ಮೇಲೆ ಅಲ್ಲ…

ಜನರ ಆಕ್ರೋಶ ಪ್ರಗತಿಪರ ಕಾಂಗ್ರೆಸ್ ಮೇಲೆ ಅಲ್ಲ…

0

ಬೆಂಗಳೂರು: ಜನರ ಆಕ್ರೋಶ ಬೆಲೆ ಏರಿಕೆ ಮಾಡಿರುವ ಬಿಜೆಪಿಯ ವಿರುದ್ಧವೇ ಹೊರತು ಪ್ರಗತಿಪರ ಕಾಂಗ್ರೆಸ್ ಮೇಲೆ ಅಲ್ಲ! ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೇಂದ್ರ ಸರ್ಕಾರದ ಬೆಲೆ‌ ಏರಿಕೆ ನೀತಿ ಖಂಡಿಸಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ ಎನ್‌ಡಿಎ ಕೂಟದ ಆಂತರಿಕ ಜಗಳ, ನಾಯಕತ್ವದ ಕೊರತೆಯನ್ನು ಮುಚ್ಚಿಡಲು ಅವರು ಜನಾಕ್ರೋಶ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆಯೇ ಹೊರತು ಜನರಿಗಾಗಿ ಅಲ್ಲ.

ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹಾಲಿನ ದರ ಕರ್ನಾಟಕದಲ್ಲೇ ಕಡಿಮೆ.‌ ಸಿಮೆಂಟ್, ಕಬ್ಬಿಣ, ಎಣ್ಣೆ, ಟೂಥ್‌ಪೇಸ್ಟ್‌‌‌, ಮೊಟ್ಟೆ ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಬಿಜೆಪಿ. ಚಿನ್ನದ ಬೆಲೆ 90,000 ರೂ. ಗಡಿ ದಾಟಿದ್ದು, ಕಳೆದ 11 ವರ್ಷಗಳಿಂದ ಮಧ್ಯಮ ವರ್ಗದ ಹೆಣ್ಣುಮಕ್ಕಳು ಚಿನ್ನ ಧರಿಸಲಾಗುತ್ತಿಲ್ಲ. ಹೀಗಾಗಿ ಜನಾಕ್ರೋಶ ಬಿಜೆಪಿ ಸರ್ಕಾರದ ವಿರುದ್ಧವೇ ಆಗಬೇಕಿದೆ.

ಭ್ರಷ್ಟ ಬಿಜೆಪಿ ವಿರುದ್ಧ ಹೋರಾಟವನ್ನು ಮಾಡಿ, 2028ರಲ್ಲಿ ಮತ್ತೆ ‘ನಿಮ್ಮ ಸರ್ಕಾರ’ ಅಧಿಕಾರಕ್ಕೆ ಬರಲಿದೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು.

ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಉತ್ತಮ ಆಡಳಿತವನ್ನು ನೀಡುತ್ತಿದೆ.‌ ನಮ್ಮದು ರೈತ ಪರ, ಕಾರ್ಮಿಕ ಪರ, ಎಲ್ಲಾ ವರ್ಗದ ಜನರ ಪರ ಇರುವ ಸರ್ಕಾರ. ಕಾಮಾಲೆ ಕಣ್ಣಲ್ಲಿ ನೋಡುವುದು ಬಿಟ್ಟು, ಆತ್ಮಸಾಕ್ಷಿಯ ಒಳಗಣ್ಣನ್ನು ತೆರೆದು ನೋಡಿ; ನಮ್ಮ ಸರ್ಕಾರದ ಪ್ರತಿಯೊಂದು ಕೆಲಸಗಳೂ ಅಭಿವೃದ್ಧಿ ಪರವಾಗಿದೆ. ಬಿಜೆಪಿಯ ಬೆಲೆ ಏರಿಕೆ ನೀತಿಯನ್ನು ತಡೆದು, ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾಗುತ್ತಿವೆ ಎಂದಿದ್ದಾರೆ.

Exit mobile version