Home News ಗಂಡು ಮರಿಗೆ ಆನೆ ಜನ್ಮ: ಹಾಲು ಸಿಗದೆ ಮರಿ ಸಾವು

ಗಂಡು ಮರಿಗೆ ಆನೆ ಜನ್ಮ: ಹಾಲು ಸಿಗದೆ ಮರಿ ಸಾವು

ಶಿವಮೊಗ್ಗ: ಶೆಟ್ಟಿಹಳ್ಳಿಯ ಕಾಡಿನಲ್ಲಿ ತಾಯ್ತನಕ್ಕೆ ಅಪಕ್ವವಾದ ಆನೆಯೊಂದು ಗಂಡು ಮರಿಯೊಂದಕ್ಕೆ ಜನ್ಮ ನೀಡಿದ್ದು, ಜನ್ಮ ನೀಡಿದ ನಾಲ್ಕು ದಿನಗಳಲ್ಲಿ ತಾಯಿಯ ಹಾಲು ಸಿಗದೆ ಮರಿ ಸಾವು ಕಂಡ ದಾರುಣ ಘಟನೆ ನಡೆದಿದೆ.
ಹೇಮಾವತಿ ತಾಯ್ತನವನ್ನು ತೋರುವಷ್ಟು ಪಕ್ವವಾಗಿರಲಿಲ್ಲ. ಹಾಗಾಗಿ ಮರಿ ಆನೆ ಕೂಡಾ ಪೂರ್ಣ ಬೆಳವಣಿಗೆ ಆಗಿರಲಿಲ್ಲ. ಅಲ್ಲದೇ ಹೇಮಾವತಿಗೆ ಮರಿಗೆ ಹಾಲು ಉಣಿಸಲು ಸಾಧ್ಯವಾಗಲೇ ಇಲ್ಲ. ತಾಯಿಯ ಹಾಲು ಸಿಗದೇ ಮರಿ ತನ್ನ ಪ್ರಾಣವನ್ನೇ ಬಿಟ್ಟಿದೆ.
ಹೇಮಾವತಿ ಎಂಬ ಸುಮಾರು ೧೦.೫ ವರ್ಷದ ಆನೆ ಕಾಡಿನಲ್ಲಿ ಶುಕ್ರವಾರ ಮರಿ ಹಾಕಿತ್ತು. ಮರಿ ಹಾಕಿದಾಗಿನಿಂದ ತಾಯಿ ಆನೆ ಹಾಲುಣಿಸದೆ ಇದ್ದು, ಸಕ್ರೆಬೈಲಿನ ಸಿಬ್ಬಂದಿ, ಕಾವಾಡಿಗಳು ಮರಿಯನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ.
ಆದರೆ ಹೇಮಾವತಿ ಮರಿಯನ್ನು ಬಿಟ್ಟು ಹೋದಾಗ ಈ ಕಾವಾಡಿಗಳು ಹೇಮಾವತಿಯ ಹಾಲನ್ನು ಕರೆದು ಹಾಲುಣಿಸುವ ಕೆಲಸ ಮಾಡಿದ್ದಾರೆ. ಆದರೂ ಮರಿ ಹಾಲು ಕುಡಿಯದ ಕಾರಣ ಸೋಮವಾರ ಸಂಜೆ ಸಾವನ್ನಪ್ಪಿದೆ. ಹೇಮಾವತಿ ಇನ್ನೂ ಪಕ್ವವಾಗದ ಕಾರಣ ನೇತ್ರಾವತಿಯ ಜೊತೆಗೆ ಇರುತ್ತಿತ್ತು. ಸಕ್ರೆಬೈಲಿನಿಂದ ಕಾಡಿಗೆ ಬಿಟ್ಟಾಗ ಹೇಮಾವತಿ ಮತ್ತು ನೇತ್ರಾವತಿಯ ಜೊತೆಗೆ ಕಾಡಾನೆಯೊಂದು ಸೇರಿಕೊಂಡಿತ್ತು.
ಇದರಿಂದಾಗಿ ಹೇಮಾವತಿ ಗರ್ಭಾವತಿಯಾಗಿ ಶುಕ್ರವಾರ ಮರಿ ಹಾಕಿದೆ. ಆನೆಗಳು ೧೪ ವರ್ಷದ ನಂತರ ಪರಿಪಕ್ವವಾಗಿ ಮರಿಗಳಿಗೆ ಜನ್ಮ ನೀಡುತ್ತವೆ. ಮರಿ ಹಾಕಿದ ನಂತರ ತಾಯ್ತನ ಮೆರೆಯೋದಕ್ಕೆ ಸಾಧ್ಯವಾಗುತ್ತದೆ. ಆದರೆ ಹೇಮಾವತಿ ೧೦.೫ ವರ್ಷಕ್ಕೆ ಮರಿ ಹಾಕಿದ ಕಾರಣ ಎದೆಹಾಲು ಉಣಿಸಲು ಸಹ ಹಾಲು ಉತ್ಪತ್ತಿ ಕಡಿಮೆ ಇತ್ತು ಎಂದು ತಿಳಿದುಬಂದಿದೆ.
ನಿನ್ನೆ ದಾಳಿ: ಇದೇ ವೇಳೆ ಈ ಹೇಮಾವತಿಯನ್ನು ನೋಡಿಕೊಳ್ಳಲು ೫-೬ ಜನ ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ವೇಳೆ ಕಾಡಿನಲ್ಲಿ ಹೋಗುತ್ತಿದ್ದ ಕಾವಾಡಿ ಒಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದೆ. ಜೀವ ಭಯದಿಂದ ಓಡಿದ ಕಾವಾಡಿಗನಿಗೆ ಗಾಯಗಳಾಗಿದ್ದು ಮೆಗ್ಗಾನ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ.
`ಮಾವುತ ಕಾವಾಡಿ, ವೈದ್ಯರ ತಂಡ ಚೊಚ್ಚಲ ಮರಿಯನ್ನು ಉಳಿಸಿಕೊಳ್ಳಲು ನಿರಂತರ ಪರಿಶ್ರಮ ವಹಿಸಿದೆ. ತಾಯಿಗೆ ಹಾಲುಣಿಸುವ ತಾಯ್ತನದ ಪರಿಕಲ್ಪನೆ ಇಲ್ಲ. ಮರಿಗೆ ಹಾಲನ್ನು ಹೇಗೆ ನೈಸರ್ಗಿಕವಾಗಿ ಕುಡಿಯಬೇಕೆಂದು ಗೊತ್ತಿಲ್ಲ. ಹಾಲು ಕುಡಿಸಲು ನಮ್ಮ ಸಿಬ್ಬಂದಿ ಶ್ರಮಪಟ್ಟಿದ್ದಾರೆ. ಆದರೆ ಕಾಡಾನೆ ಬಹಳಷ್ಷು ದೂರ ಹೇಮಾವತಿಯೊಂದಿಗೆ ಹೆಜ್ಜೆ ಹಾಕಿದೆ. ಕಾಡಾನೆ ಹೋದಲ್ಲೆಲ್ಲ ಹೇಮಾವತಿ ತನ್ನ ಮರಿಯೊಂದಿಗೆ ಸಾಗಿದೆ. ತುಂಬಾ ಬಳಲಿದ ಮರಿಯಾನೆ ಸುಸ್ತಾಗಿ ಸಾವನ್ನಪ್ಪಿದೆ ಎಂದು ಡಿಸಿಎಫ್ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.

Exit mobile version