ಗದಗ: ರೈತರು, ಸಹಕಾರಿ ಕ್ಷೇತ್ರದಲ್ಲಿ ಅಪಾರ ಕಳಕಳಿ ಹೊಂದಿದ್ದ ಹುಲಕೋಟಿ ಹುಲಿ ಖ್ಯಾತಿಯ ದಿ.ಕೆ.ಎಚ್.ಪಾಟೀಲರು ಸಾಮಾಜಿಕ ನ್ಯಾಯದಲ್ಲಿ ಆಸಕ್ತಿ ಹೊಂದಿದ್ದ ತಮ್ಮನ್ನು ಸದಾವಕಾಲ ಬೆಂಬಲಿಸಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದರು.
ನಗರದ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿ ಭಾನುವಾರ ನಡೆದ ಸಹಕಾರಿ ರಂಗದ ಭೀಷ್ಮ ಖ್ಯಾತಿಯ ಮಾಜಿ ಸಚಿವ ದಿ.ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಘಾಟಿಸಿ, ಕೆ.ಎಚ್.ಪಾಟೀಲರೊಂದಿಗೆ ೧೯೮೦ರಿಂದ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ತಮ್ಮನ್ನು ಸಚಿವರಾಗಿ ಅನೇಕ ವಿಷಯಗಳಲ್ಲಿ ಪ್ರೋತ್ಸಾಹಿಸಿದ್ದರು. ಸಚಿವ ಸಂಪುಟದಲ್ಲಿ ಯಾವದೇ ವಿಷಯ ಚರ್ಚೆಗೆ ಬಂದಾಗ ಅದು ಜನಪರವಿದ್ದರೆ ತಕ್ಷಣವೇ ಅದಕ್ಕೆ ಅನುಮೋದನೆ ದೊರೆಯುವಂತೆ ಮಾಡುತ್ತಿದ್ದುದು ಅವರ ದೊಡ್ಡತನವಾಗಿತ್ತೆಂದು ಸ್ಮರಿಸಿದರು.
ದಿ.ಕೆ.ಎಚ್. ಪಾಟೀಲರು ಯಾವಾಗಲೂ ನೇರ ಮಾತಿನ ನಿಷ್ಟುರವಾದಿಗಳು. ಅವರು ತಮಗೆ ಸರಿ ಎನಿಸಿದ್ದನ್ನು ಹೇಳಲು ಯಾವದೇ ಹಿಂಜರಿಕೆಯಾಗಲಿ, ಅಂಜಿಕೆಯಿಲ್ಲದೆ ಹೇಳುವ ಮನೋಭಾವನೆ ಹೊಂದಿದ್ದರು. ಅವರಲ್ಲಿ ಬಲಿಷ್ಠವಾದ ಮೆಚ್ಚುವಿಕೆ, ಬಲಿಷ್ಠವಾದ ಮೆಚ್ಚದಿರುವಿಕೆಯ ಗುಣಗಳಿದ್ದವು. ಯಾರನ್ನಾದರೂ ಹಚ್ಚಿಕೊಂಡಲ್ಲಿ ಅವರೊಂದಿಗೆ ನಿಂತು ಅವರ ಎಲ್ಲ ಕೆಲಸ ಕಾರ್ಯ ಮಾಡಿಕೊಡುತ್ತಿದ್ದರು. ಇದು ಅವರ ಅಪರೂಪದ ದೊಡ್ಡ ಗುಣವಾಗಿತ್ತು. ಯಾವದೇ ಸಾರ್ವಜನಿಕರ ಕೆಲಸವಾಗಲಿ, ಅಭಿವೃದ್ಧಿ ಕಾರ್ಯವಾಗಲಿ ಇದ್ದ ಸಂದರ್ಭದಲ್ಲಿ ಯಾರ ಮನಸ್ಸಿಗೆ ನೋವಾದರೂ ಚಿಂತಿಸುತ್ತಿರಲಿಲ್ಲ. ಹಿಡಿದ ಕೆಲಸ ಕಾರ್ಯವಾಗಲೇಬೇಕು ಎಂಬುದು ಅವರ ಹಠವಾಗಿತ್ತು. ಪುತ್ರ ಸಚಿವ ಎಚ್.ಕೆ. ಪಾಟೀಲ ಮಾತ್ರ ಅಪ್ಪನ ಸ್ವಭಾವಕ್ಕೆ ತದ್ವೀರುದ್ಧವಾಗಿದ್ದಾರೆ. ಎಚ್.ಕೆ.ಪಾಟೀಲ ಪ್ರೀತಿಯಿಂದ ಯಾರದೆ ಮನಸ್ಸಿಗೆ ನೋವಾಗದಂತೆ ಕೆಲಸ ಮಾಡಿಸಿಕೊಳ್ಳುವ ಸ್ವಭಾವ ರೂಢಿಸಿಕೊಂಡಿದ್ದಾರೆ. ಸಚಿವ ಡಾ.ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ ನೇತೃತ್ವದಲ್ಲಿ ಗದಗ ಜಿಲ್ಲೆ ನಂದನವನವಾಗಿದೆ. ಕೃಷಿ, ಸಹಕಾರಿ ಕ್ಷೇತ್ರದಲ್ಲಿ ಇಬ್ಬರೂ ಸಹೋದರರು ಅಪಾರ ಕೆಲಸ ಮಾಡುವ ಮೂಲಕ ದಿ.ಕೆ.ಎಚ್. ಪಾಟೀಲರ ಹೆಸರು ಮುಂದುವರೆಸಿದ್ದಾರೆ ಎಂದು ಬಣ್ಣಿಸಿದರು.
ದಿ.ಕೆ.ಎಚ್.ಪಾಟೀಲ ಪ್ರಾರಂಭಿಸಿದ ಗದಗ ಸಹಕಾರಿ ಜವಳಿ ಮಿಲ್ ಬಗ್ಗೆ ಕೆಲವರು ಸಾರ್ವಜನಿಕ ಲೆಕ್ಕ ಸಮಿತಿಗೆ ಅಧಿಕಾರ ದುರುಪಯೋಗದ ಬಗ್ಗೆ ತಕರಾರು ತೆಗೆದು ದೂರು ಸಲ್ಲಿಸಿದ್ದರು. ಆಗ ಭಾಸ್ಕರ ಶೆಟ್ಟಿ ನೇತೃತ್ವದ ಸಾರ್ವಜನಿಕ ಲೆಕ್ಕ ಸಮಿತಿ ಗದಗಕ್ಕೆ ಆಗಮಿಸಿ ತನಿಖೆ ನಡೆಸಿ ತಕರಾರಿನಲ್ಲಿ ಯಾವದೇ ಹುರುಳಿಲ್ಲ. ಬದಲಾಗಿ ಮೂರು ತಿಂಗಳುಗಳಲ್ಲಿ ಮಿಲ್ ಪ್ರಾರಂಭಕ್ಕೆ ಅನುಮತಿ ನೀಡುವ ಮೂಲಕ ಉತ್ತಮ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ಸಚಿವ ಡಾ.ಎಚ್.ಕೆ. ಪಾಟೀಲ ಮಾತನಾಡಿ, ಕಳೆದ ವರ್ಷ ದಿ.ಕೆ.ಎಚ್. ಪಾಟೀಲರ ಜನ್ಮದಿನದಂದು ಘೋಷಿಸಿದ್ದ ೬೦ ಅಭಿವೃದ್ಧಿ ಕಾರ್ಯಗಳಲ್ಲಿ ೫೦ ಕಾರ್ಯಗಳು ಪೂರ್ಣಗೊಂಡಿವೆ. ಉಳಿದ ೧೦ ಕಾರ್ಯಗಳನ್ನು ಪುನರ್ ನಿಗದಿಪಡಿಸಿಕೊಂಡು ಮುಂದಿನ ಮಾರ್ಚ್ ೧೬ರೊಳಗಾಗಿ ಮುಗಿಸುವದಾಗಿ ಘೋಷಿಸಿದರು.
ರೈತರ ಶೋಷಣೆ ತಪ್ಪಿಸಲು ದಿ.ಕೆ.ಎಚ್.ಪಾಟೀಲ, ಬಿ.ಜಿ. ಬಣಕಾರ, ಮಾಮಲೇದೇಸಾಯಿ ಎಪಿಎಂಸಿ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯನ್ನು ಹಿಂದಿನ ಬಿಜೆಪಿ ಸರಕಾರ ಹಾಳು ಮಾಡಿತ್ತು. ಪ್ರಸ್ತುತ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅದನ್ನು ಸರಿಪಡಿಸಿದ್ದೇವೆ. ಆದರೂ ರೈತರ ಶೋಷಣೆ ನಿಂತಿಲ್ಲ. ಅದರ ವಿರುದ್ಧ ಹೋರಾಟ ನಡೆಸಬೇಕಾಗಿದೆ. ರೈತರ ಶೋಷಣೆ, ಬದುಕು ಉತ್ತಮಗೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಯತ್ನಿಸಬೇಕೆಂದು ಹೇಳಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಸಿ.ಸಿ.ಪಾಟೀಲ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ವೇದಿಕೆ ಮೇಲೆ ವಿಧಾನ ಪರಿಷತ್ ಮಾಜಿ ಸದಸ್ಯ ಯು.ಬಿ. ವೆಂಕಟೇಶ, ಶಾಸಕರಾದ ಜಿ.ಎಸ್. ಪಾಟೀಲ, ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಸಹಕಾರ ಮಹಾಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಅಶೋಕ ಮಂದಾಲಿ, ಸಿದ್ದಲಿಂಗೇಶ್ವರ ಪಾಟೀಲ ಮುಂತಾದವರಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.