ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಮ್ಮ ಲಿಬರಲ್ಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆ ಮೂಲಕ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗೇ ಅವರ ಬಗ್ಗೆ ಅಸಮಾಧಾನವಿತ್ತು. ಮುಂಬರುವ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಲಿಬರಲ್ಸ್ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿವೆ. ಟ್ರುಡೋ ಅವರ ಮೇಲಿನ ಭಿನ್ನಾಭಿಪ್ರಾಯದಿಂದಾಗಿ ಹಣಕಾಸು ಸಚಿವೆ ಕ್ರಿಸ್ಟಿಯ ಫ್ರೀಲ್ಯಾಂಡ್ ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಸ್ವಲ್ಪ ಮೊದಲು ವಸತಿ ಸಚಿವರೂ ರಾಜೀನಾಮೆ ನೀಡಿದ್ದರು. ಟ್ರುಡೋ ಜನಪ್ರಿಯತೆ ಪಾತಾಳಕ್ಕೆ ಕುಸಿದು ಹೋಗಿತ್ತು. ಆಕಾಶಕ್ಕೆ ಏರಿದ್ದ ಬೆಲೆಗಳು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿತ್ತು. ಬಹಳ ಮುಖ್ಯವಾಗಿ ಯುವಜನತೆಯ ಬೆಂಬಲ ಕಡಿಮೆಯಾಗಿದೆ.
ಫ್ರೀಲ್ಯಾಂಡ್ ರಾಜೀನಾಮೆ ನಂತರ ಟ್ರುಡೋ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಕಡಿಮೆ ಕಾಣಿಸಿಕೊಂಡರು. ಬಹುತೇಕ ಸಮಯವನ್ನು ತಮ್ಮ ಸ್ಕೈರೆಸಾರ್ಟ್‌ನಲ್ಲಿ ಕಳೆದರು. ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ಲಿಬರಲ್ಸ್ ಸೋಲು ಕಂಡಿತು. ಅವರ ಮೈತ್ರಿ ಪಕ್ಷವಾದ ನ್ಯೂ ಡೆಮೋಕ್ರಟಿಕ್ ಪಾರ್ಟಿ(ಎನ್‌ಡಿಪಿ) ನಾಯಕ ಜಗಮೀತ್ ಸಿಂಗ್ ಸಂಸತ್ತಿನಲ್ಲಿ ಅವಿಶ್ವಾಸ ಮತ ಮಂಡಿಸುವುದಾಗಿ ಹೇಳಿದರು. ಚಳಿಗಾಲದ ಬ್ರೇಕ್ ನಂತರ ಜನವರಿ ೨೭ರಿಂದ ಅಧಿವೇಶನ ಆರಂಭವಾಗಲಿದ್ದು, ಅದರಲ್ಲಿ ಟ್ರುಡೋಗೆ ಬಿಸಿ ಎದುರಾಗಲಿತ್ತು. ಟ್ರುಡೋ ಕೆನಡಾದ ೨೩ನೇ ಪ್ರಧಾನ ಮಂತ್ರಿ. ಒಂದು ಅಮೆರಿಕದಲ್ಲೂ ಅವರು ಜನಪ್ರಿಯತೆ ಪಡೆದುಕೊಂಡಿದ್ದರು. ಒಂದು ಕಾಲದಲ್ಲಿ ಅವರನ್ನು ಜಾನ್ ಎಫ್ ಕೆನಡಿ ಅವರಿಗೆ ಹೋಲಿಸಲಾಗುತ್ತಿತ್ತು. ೨೦೧೫ರಲ್ಲಿ ಎರಡನೇ ಕಿರಿಯ ಪ್ರಧಾನಿಯೆನ್ನಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಟ್ರುಡೋ ೯ ವರ್ಷಗಳ ಕಾಲ ಗದ್ದುಗೆ ಹಿಡಿದಿದ್ದರು. ೨೦೧೭ರಲ್ಲಿ ಅಮೆರಿಕ ಅಕ್ರಮ ವಲಸೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೆ, ಇತ್ತ ಟ್ರುಡೋ ವಲಸಿಗರನ್ನು ಸ್ವಾಗತಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಸಂಪುಟದಲ್ಲಿ ಅರ್ಧಕ್ಕರ್ಧ ಮಹಿಳೆಯರಿಗೆ ಅವಕಾಶ ನೀಡಿ, ಮಹತ್ವದ ಬದಲಾವಣೆಗಳನ್ನು ತಂದರು. ಈಗ ಅದೇ ವಲಸೆ ನೀತಿ ಸ್ಥಳೀಯರ ಉದ್ಯೋಗಕ್ಕೆ ಕುತ್ತು ತಂದಿರುವ ಆರೋಪ ಹೊತ್ತು ನಿಂತಿದೆ. ವಲಸೆ ನೀತಿಯನ್ನು ಬಿಗಿಗೊಳಿಸುವಂತೆ ಟ್ರುಡೋ ಸರ್ಕಾರದ ಮೇಲೆ ಒತ್ತಡ ಬಂದಿತ್ತು.
ಸ್ಥಳೀಯ ಮತ್ತು ಆಂತರಿಕ ಸಮಸ್ಯೆಗಳಿಂದ ಜನರ ಗಮನವನ್ನು ಸೆಳೆಯಲು ಟ್ರುಡೋ ಕಂಡುಕೊಂಡಿದ್ದ ಮಾರ್ಗವೆಂದರೆ ಭಾರತವನ್ನು ಹಳಿಯುವುದು. ಲಿಬರಲ್ ಪಾರ್ಟಿ ಸಂಸದರಾದ ಸಿಯಾನ್ ಕೇಸಿ, ಕೆನ್ ಮೆಕ್‌ಡೊನಾಲ್ಡ್ ಮುಂತಾದವರು ಅಧಿಕಾರದಿಂದ ಕೆಳಗಿಳಿಯುವಂತೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಖಾಲಿಸ್ತಾನಿ ಭಯೋತ್ಪಾದಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರ ಇದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿ, ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾದರೂ, ಅದಕ್ಕೆ ಸರಿಯಾದ ಆಧಾರ ನೀಡದೆ ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾಗಬೇಕಾಯಿತು. ಭಾರತೀಯ ರಾಜತಾಂತ್ರಿಕ ಕಚೇರಿಯ ಸಿಬ್ಬಂದಿಯನ್ನು ನಿಜ್ಜರ್ ಹತ್ಯೆಯಲ್ಲಿ `ಪರ್ಸನ್ ಆಫ್ ಇಂಟರೆಸ್ಟ್’ (ಅಪರಾಧದಲ್ಲಿ ಪಾಲುದಾರ ಎಂದು ಗುರುತಿಸಲ್ಪಟ್ಟಿದ್ದು, ಇನ್ನೂ ಬಂಧನಕ್ಕೀಡಾಗದ ವ್ಯಕ್ತಿ) ಎಂದು ಹೇಳಿ ಭಾರತದ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಕೆನಡಾದ ಆರು ರಾಜತಾಂತ್ರಿಕ ಸಿಬ್ಬಂದಿಯನ್ನು ಭಾರತ ಎಕ್ಸ್ಪೆಲ್ ಮಾಡಿತು. ಟೊರೊಂಟೋದಲ್ಲಿ ಹಿಂದೂ ದೇವಸ್ಥಾನದ ಮೇಲೆ ನಡೆದ ಸಿಖ್ಖರಿಂದ ನಡೆದ ದಾಳಿ, ಎರಡೂ ದೇಶಗಳ ನಡುವೆ ಸಂಬಂಧ ಇನ್ನಷ್ಟು ಬಿರುಕು ಬಿಡುವಂತಾಯಿತು.
ಎನ್‌ಐಎಯಿಂದ ನಿಜ್ಜರ್ ಭಯೋತ್ಪಾದಕ ಎಂದು ಘೋಷಣೆಯಾಗಿದ್ದ. ಅವನನ್ನು ಭಾರತಕ್ಕೆ ಒಪ್ಪಿಸದೆ, ಆತನ ಕೊಲೆಯಾದಾಗ ಅದನ್ನು ಭಾರತದ ಮೇಲೆ ಹೊರಿಸಿ ಖಾಲಿಸ್ತಾನಿಗಳ ಅನುಕಂಪ ಪಡೆಯಲು ಯತ್ನಿಸಿದ್ದು ನಿಚ್ಚಳವಾಗಿ ಕಂಡುಬಂದಿತ್ತು. ಕೆನಡಾದಲ್ಲಿ ೨೦೨೧ರ ಸೆನ್ಸಸ್‌ನಂತೆ ಶೇಕಡ ೨.೧ರಷ್ಟು ಸಿಖ್ಖರಿದ್ದಾರೆ. ಈಗ ಆ ಪ್ರಮಾಣ ಇನ್ನೂ ಹೆಚ್ಚಾಗಿದೆ. ಸಿಖ್ಖರ ಮತಗಳನ್ನು ಗಳಿಸಲು ಟ್ರುಡೋ ಈ ತಂತ್ರ ರೂಪಿಸಿದ್ದಾರೆ ಎಂದು ಟೀಕಾಕಾರರು ವಿಶ್ಲೇಷಿಸುವಂತಾಯಿತು. ಆದರೆ ಈ ತಂತ್ರವೂ ಟ್ರುಡೋ ಜನಪ್ರಿಯತೆ ಕುಸಿಯಲು ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಅದೇ ರೀತಿ, ಕೆನಡಾದ ನಾಲ್ಕನೇ ಅತಿ ದೊಡ್ಡ ಸಮುದಾಯ ಎನ್ನಿಸಿಕೊಂಡಿರುವ ಜ್ಯೂಗಳ ವಿಶ್ವಾಸವನ್ನೂ ಟ್ರುಡೋ ಕಳೆದುಕೊಂಡಿದ್ದರು. ಹಮಾಸ್ ಮೇಲಿನ ಯುದ್ಧದ ವಿಷಯದಲ್ಲಿ ಟ್ರುಡೋ ಅವರಿಂದ ಸಾಕಷ್ಟು ಬೆಂಬಲ ಸಿಗಲಿಲ್ಲ ಎನ್ನುವ ಆಕ್ರೋಶ ಜ್ಯೂಗಳದ್ದು. ಜೊತೆಗೆ ಭ್ರಷ್ಟಾಚಾರದ ಆರೋಪವೂ ಟ್ರುಡೋ ಸರ್ಕಾರದ ಮೇಲೆ ಬಂದಿತ್ತು. ಕಳೆದ ವರ್ಷದ ಜೂನ್‌ನಲ್ಲಿ ನಡೆದಿದ್ದ ವಿಶೇಷ ಚುನಾವಣೆಯಲ್ಲಿ ಲಿಬರಲ್ಸ್‌ಗಳ ಭದ್ರಕೋಟೆ ಎನ್ನಿಸಿದ್ದ ಟೊರೊಂಟೋವನ್ನು ಕಳೆದುಕೊಂಡಿತ್ತು. ಟ್ರುಡೋ ಅವರದು ಅಲ್ಪಸಂಖ್ಯಾತ ಸರ್ಕಾರವಾಗಿದ್ದು, ಎನ್‌ಡಿಪಿಯಿಂದ ಅದಕ್ಕೆ ಬೆಂಬಲ ದೊರೆತಿತ್ತು. ಸೆಪ್ಟೆಂಬರ್‌ನಲ್ಲಿ ಅದು ತನ್ನ ಬೆಂಬಲವನ್ನು ಹಿಂಪಡೆದುಕೊಂಡಿತ್ತು.