Home ತಾಜಾ ಸುದ್ದಿ ಕೃಪಾಂಕವನ್ನು ಕೊಡುವುದರಿಂದ ತಪ್ಪು ಮರೆಮಾಚಲು ಸಾಧ್ಯವಿಲ್ಲ

ಕೃಪಾಂಕವನ್ನು ಕೊಡುವುದರಿಂದ ತಪ್ಪು ಮರೆಮಾಚಲು ಸಾಧ್ಯವಿಲ್ಲ

0

UPSC ಮಾದರಿಯಲ್ಲಿ ಲೋಕಸೇವಾ ಆಯೋಗ ಪರೀಕ್ಷೆಯನ್ನು ನಡೆಸಲಿ…

ಬೆಂಗಳೂರು: ಪದೇ ಪದೇ ಪರೀಕ್ಷಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳನ್ನು ಮಾಡುತ್ತಿರುವುದು ಇವರ ಅಸಮರ್ಥತೆ, ನಿರುತ್ಸಾಹ, ಬೇಜವಾಬ್ದಾರಿ, ಜಡ್ಡುಗಟ್ಟಿರುವ ಮನಃಸ್ಥಿತಿಗೆ ಹಿಡಿದಿರುವ ಕೈಗನ್ನಡಿ.

ಆಯೋಗದ ಸದಸ್ಯರು ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ ಇನ್ನಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. UPSC ಮಾದರಿಯಲ್ಲಿ ಲೋಕಸೇವಾ ಆಯೋಗ ಪರೀಕ್ಷೆಯನ್ನು ನಡೆಸಲಿ… ಪರೀಕ್ಷಾರ್ಥಿಗಳ ಹತ್ತಾರು ತಿಂಗಳ ಪರಿಶ್ರಮವನ್ನು ನೀರುಪಾಲು ಮಾಡುವ ಕೆಲಸವನ್ನು ಆಯೋಗ ಮಾಡದಿರಲಿ.

ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳನ್ನು ಮಾಡಿ ಅದಕ್ಕೆ ಕೃಪಾಂಕವನ್ನು ಕೊಡುವುದರಿಂದ ಸರ್ಕಾರದ ಅಥವಾ ಪರೀಕ್ಷಾ ನಿಯಂತ್ರಕರ ತಪ್ಪನು ಮರೆಮಾಚಲು ಸಾಧ್ಯವಿಲ್ಲ. ಆಯೋಗದಲ್ಲಿ ಇಚ್ಛಾಶಕ್ತಿ ಹಾಗೂ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿದೆ.

ವಾಕ್ಯ ರಚನೆಯಲ್ಲಿ ದೋಷಗಳು, ಪ್ರಶ್ನೆಗಳ ಉತ್ತರದ ಆಯ್ಕೆಗಳೇ ಕಣ್ಮರೆಯಾಗುವುದು, ಕನ್ನಡದಲ್ಲಿ ಒಂದು, ಆಂಗ್ಲದಲ್ಲಿ ಒಂದು ಅರ್ಥ ನೀಡುವ ವಾಕ್ಯಗಳು ರಚನೆಯಾಗದೆ ‘ಪರೀಕ್ಷಾರ್ಥಿ ಸ್ನೇಹಿ’ ಯಾಗಿ ಪ್ರಶ್ನೆ ಪತ್ರಿಕೆ ಮೂಡಿಬರಲಿ. ಒಂದು ಬಾರಿ ಪರೀಕ್ಷೆ ನಡೆಸುವುದಕ್ಕೆ ಕೋಟಿ ಕೋಟಿ ಹಣ ಖರ್ಚಾಗುತ್ತದೆ, ಇದರ ಉತ್ತರದಾಯಿತ್ವವನ್ನು ಅರಿತು ಇನ್ನಷ್ಟು ಪ್ರಬುದ್ಧತೆಯಿಂದ, ಪಕ್ವಾವಾಗಿ, ವೃತ್ತಿಪರತೆಯಿಂದ ಕೆಲಸ ಮಾಡಲಿ ಎಂದಿದ್ದಾರೆ.

Exit mobile version