Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕಾಡುಕೋಣ ದಾಳಿ: ಮಹಿಳೆ ಸಾವು

ಕಾಡುಕೋಣ ದಾಳಿ: ಮಹಿಳೆ ಸಾವು

0

ಚಿಕ್ಕಮಗಳೂರು: ಕಾಫಿ ಕೊಯ್ದು ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಬುಧವಾರ ಬೆಳೆಗ್ಗೆ ಈ ದುರ್ಘಟನೆ ನಡೆದಿದೆ. ಹಳೇಕೋಟೆ ಗ್ರಾಮದ ಕಾಫಿ ಬೆಳೆಗಾರರಾದ ಹಳೇಕೋಟೆ ರಮೇಶ್ ಅವರ ಶಾರದಾಂಭ ಎಸ್ಟೇಟ್ ನಲ್ಲಿ ಈ ದುರ್ಘಟನೆ ನಡೆದಿದೆ.

ಬುಧವಾರ ಬೆಳಿಗ್ಗೆ ಅಸ್ಸಾಂ ಮೂಲದ ಕಾರ್ಮಿಕರು ರಮೇಶ್ ಅವರ ತೋಟದಲ್ಲಿ ಕಾಫಿ ಕೊಯ್ದು ಮಾಡುವುದರಲ್ಲಿ ನಿರತರಾಗಿದ್ದರು. ಸುಮಾರು 11 ಗಂಟೆ ಸಮಯದಲ್ಲಿ ಏಕಾಏಕಿ ಕಾಡುಕೋಣವೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಅಸ್ಸಾಂ ಮೂಲದ ವಿವಾಹಿತ ಮಹಿಳಾ ಕಾರ್ಮಿಕರೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಬಸೂರಿ ಬೀಬಿ (42 ವರ್ಷ) ಸಾವನ್ನಪ್ಪಿರುವ ದುರ್ದೈವಿ. ಕಾಡುಕೋಣ ಮಹಿಳೆಯ ಹೊಟ್ಟೆ ಮತ್ತು ಎದೆಯ ಭಾಗದಕ್ಕೆ ತಮ್ಮ ಕೊಂಬಿನಿಂದ ತಿವಿದಿದ್ದು, ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Exit mobile version