Home ನಮ್ಮ ಜಿಲ್ಲೆ ಉಡುಪಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲ

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲ

0

ಉಡುಪಿ: ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ.‌ ಭಿನ್ನಮತ ಇರುವುದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಭಿನ್ನಮತ ಪ್ರತಿದಿನ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತದೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಇಲ್ಲ ಎನ್ನುವುದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಗಲಾಟೆ ನಮಗೆ ಅನುಕೂಲ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ಇಲ್ಲ.‌ ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ವಿಭಿನ್ನಚೇತನರಿಗೆ ಅನುದಾನ ಕಡಿತ ಇಲ್ಲ: ವಿಭಿನ್ನಚೇತನರು ಹಾಗೂ ಹಿರಿಯ ನಾಗರಿಕ ಇಲಾಖೆ ಅನುದಾನ ಕಡಿತ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, ನಮ್ಮ ಇಲಾಖೆ 32 ಸಾವಿರ ಕೋಟಿಗಿಂತ ಹೆಚ್ಚಿನ ಗಾತ್ರದ ಬಜೆಟ್ ಹೊಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಭಿನ್ನ ಚೇತನರ ಯಾವುದೇ ಅನುದಾನ ಕಡಿತ ಮಾಡುವುದಿಲ್ಲ ಎಂದರು.

ಕಳಪೆ ಆಹಾರ ಪೂರೈಸಿದರೆ ಕ್ರಮ: ರಾಜ್ಯದಲ್ಲಿ ಅಂಗನವಾಡಿಗೆ 50 ವರ್ಷದ ಇತಿಹಾಸವಿದೆ.‌ 70 ಸಾವಿರ ಅಂಗನವಾಡಿಯಲ್ಲಿ 35 ಲಕ್ಷ ಮಕ್ಕಳ ಪಾಲನೆ ಮಾಡಲಾಗುತ್ತದೆ.‌ ಅಂಗನವಾಡಿಗಳಲ್ಲಿ ಕಳಪೆ ಅಕ್ಕಿ ವಿತರಣೆ, ಆಹಾರ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.

ಬಾಣಂತಿ ಸಾವು ಪ್ರಕರಣ ಗಂಭೀರ : ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾನು ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳ್ಳಾರಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ. ಬಳ್ಳಾರಿಗೆ ಭೇಟಿ ಕೊಟ್ಟಿಲ್ಲ ಎಂದರೆ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದೇವೆ ಎಂದರ್ಥವಲ್ಲ.‌ ಸರ್ಕಾರ ಮತ್ತು ಮಂತ್ರಿಗಳಿಗೆ ಬಹಳ ಜವಾಬ್ದಾರಿ ಇದೆ. ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ: ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ. ಎನ್‌ಕೌಂಟರ್ ನಕಲಿ ಎಂದು ಅನುಮಾನಪಡುವುದು ಬೇಡ. ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆಯ ಆವಶ್ಯಕತೆ ಇಲ್ಲ. ಅಗತ್ಯಬಿದ್ದರೆ ಮುಖ್ಯಮಂತ್ರಿ ಹಾಗೂ ಗೃಹಸಚಿವರೊಂದಿಗೆ ಚರ್ಚಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿಕ್ರಮ್ ಗೌಡ ವಿರುದ್ಧ ಹಲವು ಪ್ರಕರಣಗಳು ಇದ್ದವು. ನಕ್ಸಲೈಟ್ ಗಳನ್ನು ಕಟ್ಟಿಹಾಕಬೇಕು ಎಂಬುದು ಸರ್ಕಾರದ ನಿರ್ಧಾರ. ಕೂಂಬಿಂಗ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡ ಬಳಿ ಕೂಡಾ ಶಸ್ತ್ರಾಸ್ತ್ರಗಳು ಇದ್ದವು. ವಿಕ್ರಂ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದರಿಂದ ಪ್ರತಿದಾಳಿ ಮಾಡದಿದ್ದರೆ ಪೊಲೀಸರ ಜೀವಕ್ಕೆ ಹಾನಿ ಆಗುತ್ತಿತ್ತು. ನಕ್ಸಲೈಟ್‌ನ್ನು ಬೇರು ಸಮೇತ ಕಿತ್ತುಹಾಕಬೇಕು. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವು. ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯ ಇದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು.

Exit mobile version