Home ಅಪರಾಧ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಶಾಸಕ ಕಾಮತ್ ವಿರುದ್ಧ ಪ್ರಕರಣ

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಶಾಸಕ ಕಾಮತ್ ವಿರುದ್ಧ ಪ್ರಕರಣ

0

ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ನಡೆದಿರುವ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಬೆಂಬಲಿಗರೆನ್ನಲಾದ ೧೧ ಮಂದಿ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಎಂಬವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ರವಿವಾರ ರಾತ್ರಿ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನು ಸ್ವಾಗತಿಸಲು ಸ್ವಯಂಸೇವಕ ಎಂಬ ನೆಲೆಯಲ್ಲಿ ನಾನು ಆಶಾಲತಾ ಹಾಗೂ ದಯಾನಂದ ನಾಯ್ಕ ಎಂಬವರ ಜೊತೆ ನಿಂತಿದ್ದೆ. ಈ ವೇಳೆ ಆಗಮಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ನಮ್ಮನ್ನು ಉದ್ದೇಶಿಸಿ ’ದೇವಸ್ಥಾನಕ್ಕೆ ಕಲ್ಲು ಹೊಡೆಯುವ ನಿಮಗೆ ಇಲ್ಲೇನು ಕೆಲಸ?’ ಎಂದು ರಾಜಕೀಯ ಪ್ರೇರಿತವಾಗಿ ಪ್ರಶ್ನಿಸಿದ್ದಾರೆ. ಇದನ್ನು ಆಕ್ಷೇಪಿಸಿದ ನಾವು ಶಾಸಕರನ್ನು ಪ್ರಶ್ನಿಸಿದೆವು. ಈ ವೇಳೆ ಅಶ್ವಿತ್ ಕೊಟ್ಟಾರಿ, ಮಣಿ, ಜಯಪ್ರಕಾಶ್ ಎಂಬವರು ಹಾಗೂ ಇತರ ಏಳೆಂಟು ಮಂದಿ ನನ್ನ ಮೇಲೆ ಹಲ್ಲೆ ನಡೆಸಿ, ಅಂಗಿಯನ್ನು ಹರಿದು ಹಾಕಿದ್ದಾರೆ. ಜಯಪ್ರಕಾಶ್ ಎಂಬಾತ ನನಗೆ ಜೀವ ಬೆದರಿಕೆ ಕೂಡಾ ಹಾಕಿದ್ದಾನೆ ಎಂದು ಯಶವಂತ ಪ್ರಭು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಹಲ್ಲೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಶಾಸಕ ವೇದವ್ಯಾಸ ಕಾಮತ್, “ಆತನ ಕೈ ಕಾಲು ಮುರಿಯಿರಿ” ಹಲ್ಲೆ ಆರೋಪಿಗಳಿಗೆ ದುಷ್ಪ್ರೇರಣೆ ನೀಡಿದ್ದಾರೆ ಎಂದು ಯಶವಂತ ಪ್ರಭು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನನ್ವಯ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version