Home ತಾಜಾ ಸುದ್ದಿ ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಗಡಿಪಾರು ಮಾಡಿ

ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಗಡಿಪಾರು ಮಾಡಿ

0

ಹಾವೇರಿ: ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಮೊದಲು ಸರಕಾರ ಒದ್ದು ಹೊರಗೆ ಹಾಕಬೇಕು. ಕನ್ನಡಿಗರಿಗೆ ಅವಮಾನ ಮಾಡುವವರ ಮೇಲೆ ಸರಕಾರ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ‌ಮಾತನಾಡಿದ ಅವರು, ದಿಟ್ಟವಾಗಿ ಕನ್ನಡ ಮಾತನಾಡುತ್ತೇನೆ ಎಂದ ಕಂಡಕ್ಟರ್‌ಗೆ ಅಭಿನಂದನೆ. ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಮೊದಲು ಸರಕಾರ ಒದ್ದು ಹೊರಗೆ ಹಾಕಬೇಕು. ಕಂಡಕ್ಟರ್ ಮೇಲಿನ ಫೋಕ್ಸೋ ಕೇಸ್‌ನ್ನು ಕೂಡಲೇ ಹಿಂಪಡೆಯಬೇಕು ಈ ಘಟನೆಯ ಬಗ್ಗೆ ಮಂತ್ರಿಗಳು ಮೃದುವಾಗಿ ಮಾತನಾಡುತ್ತಾರೆ. ಮಂತ್ರಿಗಳು ಎಲ್ಲೋ ಮರಾಠಿ ಮಾತನಾಡುವವರ ಮುಲಾಜಿಗೆ ಬಿದ್ದಿದ್ದಾರೆ. ಕನ್ನಡ ಚಳುವಳಿಗಾರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
ಕೂಡಲೇ ಸರಕಾರ ಮಹಾರಾಷ್ಟ್ರ ಸರಕಾರದ ಜೊತೆ ಮಾತನಾಡಬೇಕು, ಪುಂಡರಿಗೆ ಎಚ್ಚರಿಕೆ ಕೊಡಬೇಕು. ಕನ್ನಡಿಗರಿಗೆ ಅವಮಾನ ಮಾಡುವವರ ಮೇಲೆ ಸರಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಇಲ್ಲಿಯ ಅನ್ನ ತಿಂದು, ನೀರು ಕುಡಿದು ನಾಲಾಯಕ್ ಅನ್ನುವ ಪದ ಬಳಕೆ ಮಾಡುವುದು ಸರಿಯಲ್ಲ ಕೂಡಲೇ ಇಂಥವರನ್ನು ಗಡಿಪಾರು ಮಾಡಬೇಕು. ಹಿಂದೆ ನಮ್ಮ ಸರಕಾರ ಇದ್ದಾಗ ಇಂಥದ್ದೇ ಒಂದು ಪ್ರಕರಣ ನಡೆದಿತ್ತು, ಆಗ ನಮ್ಮ ಸರಕಾರ ಕಠಿಣ ಕ್ರಮ ಕೈಗೊಂಡಿತ್ತು ಎಂದು ಹೇಳಿದರು.
ಎಸ್‌ಸಿಪಿ, ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರಕಾರ. ಎಸ್ಸಿ ಎಸ್ಟಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಎಸ್ಸಿಪಿ, ಟಿಎಸ್ಪಿ ಹಣವನ್ನೆ ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಮೊದಲು ಅಂತಹ ಸಮಾಜಗಳಿಗೆ ಹಣ ಬಿಡುಗಡೆ ಮಾಡಲಿ. ಎಸ್‌ಸಿ, ಎಸ್‌ಟಿ ನಿಗಮಗಳಿಗೆ ಮೊದಲೇ ಕಡಿಮೆ ಹಣ ನಿಗದಿ ಮಾಡಿದ್ದಾರೆ, ಅದರಲ್ಲಿ ಈವರೆಗೆ ಕೇವಲ 25% ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

Exit mobile version