Home ವೈವಿಧ್ಯ ಸಂಪದ ಒಂದರಿಂದಲೇ ಎರಡು ಫಲ

ಒಂದರಿಂದಲೇ ಎರಡು ಫಲ

0

ಒಂದೇ ಉಪಾಯದಿಂದ ಎರಡು-ಮೂರು ಪ್ರಯೋಜನಗಳು ಸಿಗುವಂತಿದ್ದರೆ ಅದು ಎಲ್ಲರಿಗೂ ಬೇಕು. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದು ಉರುಳಿಸಿದಂತೆ' ಎಂಬುದಾಗಿ ಕನ್ನಡದಲ್ಲಿ ನಾಣ್ಣುಡಿ ಇದೆ.ಏಕಾಕ್ರಿಯಾ ದ್ವ್ಯರ್ಥಕರೀ ಬಭೂವ’ ಎಂಬುದಾಗಿ ಸಂಸ್ಕೃತದಲ್ಲಿ ಪ್ರಸಿದ್ಧವಾದ ಮಾತಿದೆ. ಹಾಗೆಯೇ, ಇಹದಲ್ಲಿ ಅಭ್ಯುದಯ' ಹಾಗೂ ಪರದಲ್ಲಿನಿಃಶ್ರೇಯಸ’ ಎರಡನ್ನೂ ಕೊಡಬಲ್ಲ ಒಂದು ಉಪಾಯವಿದೆ.
ಭಗವಂತನ ನಾಮಮಂತ್ರ ಸಾಧನೆ ಇಹದಲ್ಲಿ ಅಭ್ಯುದಯ ಮತ್ತು ಪರದಲ್ಲಿ ಶ್ರೇಯಸ್ಸನ್ನು ನೀಡಬಲ್ಲದು. ಅಭ್ಯುದಯ' ಎಂದರೆ ಏಳ್ಗೆ, ಈಗಿರುವ ಸ್ಥಿತಿಗಿಂತ ಉತ್ತಮ ಸ್ಥಿತಿ. ಆರೋಗ್ಯ, ಆಯುಷ್ಯ, ಕೌಟುಂಬಿಕ ಸಮೃದ್ಧಿ, ನೆಮ್ಮದಿ ಮುಂತಾದವುಗಳು ಈಗ ಇರುವುದಕ್ಕಿಂತ ಹೆಚ್ಚು ಸಿಗಬೇಕು. ಇದು ಅಭ್ಯುದಯ. ಇದೇ ರೀತಿಯಾಗಿ ಪರಲೋಕದಲ್ಲಿಯೂ ಉತ್ತಮವಾದ ಸ್ಥಿತಿ ಅಭ್ಯುದಯ ಶಬ್ದದಲ್ಲಿಯೇ ಬರುತ್ತದೆ.ನಿಃಶ್ರೇಯಸ’ ಎಂದರೆ ಮೋಕ್ಷ. ಅದು ಪರಲೋಕಕ್ಕಿಂತಲೂ ಮೇಲಿನ ಸ್ಥಿತಿ. ಕೆಲವರು ಮರಣವನ್ನೇ ಮೋಕ್ಷವೆಂದು ಭಾವಿಸುತ್ತಾರೆ. ಆದರೆ ಹಾಗಿಲ್ಲ. ಸುಮ್ಮನೆ ಮರಣ ಹೊಂದಿದವರು ಮತ್ತೆ ಹುಟ್ಟಿಬರುತ್ತಾರೆ. ಮೋಕ್ಷಕ್ಕೆ ಹೋದವರು ತಿರುಗಿ ಬರಬೇಕಾಗಿಲ್ಲ. ಏಕೆಂದರೆ ಮೋಕ್ಷವು ನಿತ್ಯಾನಂದಸ್ವರೂಪನಾದ ಪರಮಾತ್ಮನ ಸಾಯುಜ್ಯ.
ಜಾಬಾಲೋಪನಿಷತ್ತಿನಲ್ಲಿ ಬ್ರಹ್ಮಚಾರಿಗಳು ಯಾಜ್ಞವಲ್ಕ್ಯರನ್ನು ಕೇಳುತ್ತಾರೆ, ಯಾವುದನ್ನು ಜಪಿಸಿದರೆ ಅಮೃತತ್ತ್ವದ ಪ್ರಾಪ್ತಿಯಾಗುತ್ತದೆ?' ಎಂಬುದಾಗಿ. ಯಾಜ್ಞವಲ್ಕ್ಯರು ಹೇಳುತ್ತಾರೆ,ರುದ್ರಾನುವಾಕಗಳನ್ನು ಜಪಿಸಿದ್ದರಿಂದ ಅಮೃತತ್ತ್ವ ಪ್ರಾಪ್ತಿ. ಯಾಕೆಂದರೆ ರುದ್ರಾನುವಾಕದಲ್ಲಿ ಬರುವ ದೇವರ ನಾಮಗಳೆಲ್ಲವೂ ಅಮೃತತ್ತ್ವದ ನಾಮಗಳೇ ಆಗಿವೆ, ಮತ್ತು ಈ ನಾಮಗಳಿಂದಲೇ ಸಾಧಕನು ಅಮೃತನಾಗುತ್ತಾನೆ.’ ಇಲ್ಲಿ ಭಗವಂತನ ನಾಮಗಳನ್ನು (ಹೆಸರುಗಳನ್ನು) ಅಮೃತತ್ತ್ವದ ನಾಮಗಳೆಂದು ಹೇಳಿದ್ದಾರೆ. ಅಂದರೆ ಅವುಗಳನ್ನು ಹೇಳಿದ್ದರಿಂದ ಅಥವಾ ಕೇಳಿದ್ದರಿಂದ ಅಮೃತಸದೃಶವಾದ ಆನಂದವಾಗುತ್ತದೆ. ಆ ನಾಮಮಂತ್ರಗಳನ್ನು ಹೇಳಿದ್ದರಿಂದ ಉಂಟಾಗುವ ಆನಂದದಿಂದಲೇ ಅಭ್ಯುದಯ. ಯಾಕೆಂದರೆ ಲೌಕಿಕ ಬದುಕಿಗೆ ಬೇಕಾಗುವ ಎಲ್ಲ ಪುಷ್ಟಿಗಳನ್ನೂ ಅದು ಕೊಡುತ್ತದೆ.
ಮುಂದೆ ಯಾಜ್ಞವಲ್ಕ್ಯರು, `ಈ ನಾಮಗಳಿಂದಲೇ ಸಾಧಕನು ಅಮೃತನಾಗುತ್ತಾನೆ’ ಎಂದಿದ್ದಾರೆ. ಅಮೃತನಾಗುವುದು ಎಂದರೆ ನಿಃಶ್ರೇಯಸವನ್ನು ಪಡೆಯುತ್ತಾನೆ. ಭಗವಂತನ ನಾಮಕೀರ್ತನೆಯಿಂದ ಭಕ್ತಿ-ಭಕ್ತಿಯಿಂದ ಚಿತ್ತಶುದ್ಧಿ-ಚಿತ್ತಶುದ್ಧಿಯಿಂದ ಅವನ ದರ್ಶನ-ದರ್ಶನದಿಂದ ನಿಃಶ್ರೇಯಸ-ಈ ಕ್ರಮದಿಂದ ಮುಂದುವರೆದು ನಿಃಶ್ರೇಯಸವನ್ನು ಪಡೆಯುತ್ತಾನೆ.
ಹೀಗೆ ಒಂದೇ ಉಪಾಯ ಎರಡು ಪ್ರಯೋಜನಗಳನ್ನು ಸಾಧಿಸಿಕೊಡಬಲ್ಲದು. ಸಾಧಕನು ಯಾವ ದೃಷ್ಟಿಯನ್ನಿಟ್ಟುಕೊಂಡು ಈ ಉಪಾಯವನ್ನು ಪ್ರಯೋಗಿಸುತ್ತಾನೋ ಆ ಪ್ರಯೋಜನ ದೊರೆಯುತ್ತದೆ. ಅಭ್ಯುದಯದ ದೃಷ್ಟಿಯನ್ನಿಟ್ಟುಕೊಂಡು ನಾಮಸಂಕೀರ್ತನೆ ಮಾಡಿದರೆ ಅಭ್ಯುದಯ. ನಿಃಶ್ರೇಯಸದ ದೃಷ್ಟಿಯನ್ನಿಟ್ಟುಕೊಂಡು ಮಾಡಿದರೆ ನಿಃಶ್ರೇಯಸ. ತುಂಬ ವಿರಳವಾಗಿ ಕೆಲವರು ಎರಡನ್ನೂ ಪಡೆಯುತ್ತಾರೆ. ಅವರು ನಿಪುಣರು. ಕೊನೆಯಲ್ಲಿ ಸಿಗುವ ನಿಃಶ್ರೇಯಸದ ಬಗ್ಗೆಯೇ ಮೊದಲಿನಿಂದಲೂ ದೃಷ್ಟಿಯಿದ್ದರೆ ಮಧ್ಯದಲ್ಲಿ ಅಭ್ಯುದಯ ತಾನಾಗಿಯೇ ಬಂದುಹೋಗುತ್ತದೆ, ಕೊನೆಯಲ್ಲಿ ನಿಃಶ್ರೇಯಸವೇ ದೊರೆಯುತ್ತದೆ. ಕೊನೆಯ ಫಲದ ಬಗ್ಗೆಯೇ ಆರಂಭದಿಂದಲೂ ದೃಷ್ಟಿ ಇಟ್ಟುಕೊಳ್ಳುವವನು ನಿಪುಣ ಸಾಧಕ.

Exit mobile version