Home News ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ಅಡಗಿದ್ದರೂ ನುಗ್ಗಿ ಹೊಡೆಯುತ್ತಾರೆ

ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ಅಡಗಿದ್ದರೂ ನುಗ್ಗಿ ಹೊಡೆಯುತ್ತಾರೆ

ಮಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 28 ಹಿಂದೂಗಳನ್ನು ಹತ್ಯೆ ನಡೆಸಿದ್ದು, ಹತ್ಯೆ ಮಾಡಿದ ಉಗ್ರವಾದಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದಲ್ಲಿ ಅಡಗಿದ್ದರೂ ಅಲ್ಲಿಗೂ ನುಗ್ಗಿ ಹೊಡೆಯುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ನಗರದ ಮಿನಿ ವಿಧಾನಸೌಧದ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಈಗ ಪ್ರಧಾನಮಂತ್ರಿಗಳು ಸುಮ್ಮನಿರಬಹುದು, ಮುಂದಿನ ದಿನದಲ್ಲಿ ಬಿಡುವುದಿಲ್ಲ. ಬೆಂಕಿಗೆ ಕೈ ಹಾಕಿದರೆ ಹೊತ್ತಿ ಉರಿಯಬೇಕಾಗುತ್ತದೆ ಎಂದ ಅವರು ನಮಗೆ ನಮ್ಮ ಸೈನಿಕರ ಮೇಲೆ ನಂಬಿಕೆ ಇದೆ. ನಾವು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಬದ್ಧರಾಗಿದ್ದೇವೆ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಹಿಂದುಗಳ ಅಸ್ಮಿತೆಯನ್ನು ಉಳಿಸಲು ನಾವು ಒಟ್ಟು ಸೇರುವ ಅವಶ್ಯಕತೆ ಇದೆ. ಜಿಲ್ಲೆಯ ಪ್ರತಿಯೊಂದಿದು ಹಿಂದೂ ಮನೆಗಳಲ್ಲಿ ಹಿಂದುತ್ವವನ್ನು ಉಳಿಸಲು ಸೈನಿಕರಾಗಿ ಹೊರಬರಬೇಕು. ನಾವು ಒಗ್ಗಟ್ಟು ಆದಲ್ಲಿ ಮಾತ್ರ ಉಗ್ರಗಾಮಿಗಳನ್ನು ಎದುರಿಸಲು ಸಾಧ್ಯ ಎಂದರು.
ನಾವು ಜಾತಿ ಮತದ ಆಧಾರದಲ್ಲಿ ನಮ್ಮನ್ನು ಒಡೆಯುತ್ತಿದ್ದಾರೆ. ನಮ್ಮನ್ನು ಒಡೆಯುವುದರಿಂದಾಗಿ ನಾವು ಅದರ ಹಿಂದೆಯೇ ಇರುತ್ತೇವೆ. ನಾವು ಎಲ್ಲರೂ ಒಟ್ಟು ಸೇರಿದರೆ ಆಗ ಯಾರಿಂದಲೂ ಏನನ್ನೂ ಮಾಡಲು ಸಾಧ್ಯವಿಲ್ಲ. ಕಾಶ್ಮೀರ ದೇಶದ ಮುಖುಟಮಣಿ, ಹಿಂದೂ ಸಂಸ್ಕೃತಿಯ ಮಡಿಲು ಅದನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು.
ನಾವುಗಳು ಕೇವಲ ಹಿಂದೂಗಳು ಎಂಬ ಕಾರಣಕ್ಕೆ ಜಿಹಾದಿಗಳು ನಮ್ಮಲ್ಲಿ ಭಯ ಹುಟ್ಟಿಸಲು, ಯುವ ಭಾರತ ನಿರ್ಮಾಣವನ್ನು ತಡೆಯಲು ನೋಡುತ್ತಿದ್ದಾರೆ. ೨೦೧೬ರಲ್ಲಿ ಪ್ರಧಾನಮಂತ್ರಿಗಳು 370 ಆಕ್ಟ್ ತಂದುದರ ವಿರುದ್ಧ ನಡೆಸಿರುವ ದಾಳಿ. ಈ ದಾಳಿ ದೇಶದ ಮೇಲೆ ಮಾತ್ರವಲ್ಲ. ಇಡೀ ಹಿಂದೂ ಸಮಾಜದ ಮೇಲೆ ದಾಳಿ ನಡೆಸಿದ್ದಾರೆ. ಈಗ ಇದು ಹಿಂದಿನ ಭಾರತವಲ್ಲ. ಈಗ ಮೋದಿ ಮತ್ತು ಅಮಿತ್ ಶಾ ಭಾರತ ಇವರು ಭಾರತವನ್ನು ಉಳಿಸುತ್ತಾರೆ ಎಂದು ಹೇಳಿದರು.
ನಾವು ಹಿಂದೂ ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟುಕೊಂಡವರು. ಆದರೆ ನಮ್ಮೊಂದಿಗೆ ಇರುವವರು ಜಿಹಾದಿ ಮಾನಸಿಕತೆಯಿಂದ ಹಿಂದುತ್ವದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸಿಟಿಜನ್ ಆಕ್ಟ್ ಜಾರಿಗೆ ಬಂದ ಸಂದರ್ಭದಲ್ಲಿ ಮಂಗಳೂರಿನಲ್ಲೂ ವಿರೋಧಿಸಿದರು. ಆ ಸಂದರ್ಭದಲ್ಲಿ ಇಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಜಿಹಾದಿಯ ಪರ ನಿಂತವ ಈಗ ಸಂಸದನಾಗಿ ಬಂದಿದ್ದಾನೆ. ಇಂತಹ ಜಿಹಾದಿಗಳೇ ನಮ್ಮೊಂದಿಗೆ ಇದ್ದು, ಹಿಂದುತ್ವದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ಮರಣ ಹೊಂದಿದವರು ಜೀವಮಾನದಲ್ಲಿ ಯಾವ ತಪ್ಪನ್ನೂ ಮಾಡಿದವರಲ್ಲ. ಹಿಂದುಗಳಾಗಿ ಕಾಶ್ಮೀರಕ್ಕೆ ಹೋದದ್ದೇ, ಮಾರಣಹೋಮ ನಡೆದಿದೆ. ಇದಕ್ಕೆ ಪ್ರಧಾನಿ ಮೋದಿ ಅವರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಈಗಾಗಲೇ ದೇಶದ ಒಳಗೆ ಮತ, ಧರ್ಮದ ಆಧಾರದಲ್ಲಿ ಮೂರು ತುಂಡು ಮಾಡಿಯಾಗಿದೆ. ಅದರಲ್ಲಿ ಒಂದು ವರ್ಗದ ಜನರು ಶಾಂತಿಯುತವಾಗಿ ಮಕ್ಕಳನ್ನು ಹಿಡಿದುಕೊಂಡು ಪ್ರವಾಸಕ್ಕೆ ಹೋದಂತ ಸಂದರ್ಭದಲ್ಲಿ ಹತ್ಯೆ ಮಾಡಿರುವುದು ಖಂಡನೀಯ. ದೇಶದ ಹಿಂದೂಗಳು ಈಗಲಾದರ ಎಚ್ಚೆತ್ತುಕೊಳ್ಳಬೇಕು. ಇಂದು 28 ಮಂದಿಯ ಮಾರಣಹೋಮವಾಗಿದೆ, ನಾಳೆ ನಮ್ಮ ಮಾರಣಹೋಮವೂ ಆಗಬಹುದು. ನಮ್ಮನ್ನು ಎಲ್ಲಾ ಕಡೆಗಳಿಂದ ಓಡಿಸಿಯಾಗಿದೆ. ನಾವು ಓಡಿಸುವವರನ್ನು ವಿರೋಧಿಸಿ ಅವರನ್ನು ಓಡಿಸುವ ಕಾರ್ಯ ನಡೆಯಬೇಕು ಎಂದರು.
ನಮ್ಮಲ್ಲಿ ನಮ್ಮ ಸಂಸ್ಕೃತಿಯನ್ನು ಹೊಲಸಾಗಿ ಮಾತನಾಡಿದವರನ್ನು ವೈಭವಿಕರಿಸುವ ಸ್ಥಿತಿ ನಿರ್ಮಾಣವಾಗಿದ್ದು, ಹಿಂದೂ ಸಮಾಜದವರು ರಸ್ತೆಗೆ ಇಳಿಯಬೇಕಾಗಿದೆ. ನಾವು ಹೆಸರಿಗೆ ಮಾತ್ರ ಬಹುಸಂಖ್ಯಾತರು. ಯಾವಾಗಲೂ ನಮ್ಮ ಮೇಲೆ ಅನ್ಯಾಯವೇ ನಡೆಯುತ್ತಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ನೆಹರು ತನ್ನ ಪಟ್ಟವನ್ನು ಉಳಿಸಿಕೊಳ್ಳಲು ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ವಿಷ ಬೀಜ ಬಿತ್ತಿದರು, ಆ ಗಿಡ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್‌ನಿಂದ ದಾಟಿ ಬಂದು ಈಗ ಹೆಮ್ಮರವಾಗಿ ನಿಂತಿದೆ. ಕಾಂಗ್ರೆಸ್ ಕೇವಲ ಹಣ ಮಾಡುತ್ತಿದೆ. ನಿಜವಾದ ಹಿಂದುಗಳು ಈಗಲಾದರೂ ಕಾಂಗ್ರೆಸ್ ಬಿಟ್ಟು ಹೊರಗೆ ಬನ್ನಿ. ಸಿದ್ದರಾಮಯ್ಯ ಸರ್ಕಾರ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದೆ. ಇನ್ನು ಮುಂದೆ ಹಿಂದುಗಳಿಗೆ ಹುಟ್ಟಿನಿಂದ ಸೊಂಟಕ್ಕೆ ನೂಲು ಕಟ್ಟುತ್ತಾರೆ ಅದನ್ನು ಪ್ಯಾಂಟ್ ಜಾರಿಸಿ ಕತ್ತರಿಸುವ ಸಂದರ್ಭ ಬರಬಹುದು ಎಂದು ಎಚ್ಚರಿಸಿದರು.

Exit mobile version