ಬೆಂಗಳೂರು: ರೈತರ ಕೃಷಿ ಜಮೀನು, ದೇವಸ್ಥಾನ, ಮಠ ಮಾನ್ಯಗಳು, ಸ್ಮಶಾನ ಎಲ್ಲವನ್ನೂ ದೋಚಿದ್ದಾಯ್ತು ಈಗ ವಕ್ಫ್ ಆಸ್ತಿ ಹೆಸರಿನಲ್ಲಿ ಇಡೀ ಗ್ರಾಮವನ್ನೇ ದೋಚಲು ಹೊರಟಿದೆ ಈ ಲಜ್ಜೆಗೆಟ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸುಮಾರು 2,000 ಜನ ವಾಸವಿರುವ ಬೀದರ್ ತಾಲ್ಲೂಕಿನ ಧರ್ಮಾಪುರದಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸುಪರ್ದಿಗೆ ಹೋದಂತೆ ಪಹಣಿಗಳಿಂದ ಗೊತ್ತಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈಗಲಾದರೂ ಎಚ್ಚೆತ್ತುಕೊಂಡು ಸಚಿವ ಜಮೀರ್ ಅಹ್ಮದ್ ಅವರನ್ನ ಸಂಪುಟದಿಂದ ವಜಾ ಮಾಡಬೇಕು. ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಆಸ್ತಿ ನೋಂದಣಿ, ಕ್ರಯ ವ್ಯವಹಾರಗಳನ್ನ ಈ ಕೊಡಲೇ ನಿಲ್ಲಿಸಲು ಕಂದಾಯ ಇಲಾಖೆಗೆ ಆದೇಶ ನೀಡಬೇಕು ಎಂದಿದ್ದಾರೆ.