ಏಪ್ರಿಲ್ 22ರಂದು ಕಾಶ್ಮೀರದ ನಯನ ಮನೋಹರ ದೃಶ್ಯ ಕಣ್ಣುಂಬಿಕೊಳ್ಳಲು ಹೋಗಿದ್ದ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿ ಗುಂಡಿನ ಮಳೆಗೈದು ಹತ್ಯೆ ಮಾಡಲಾಗಿತ್ತು. ಈ ಪೈಶಾಚಿಕ ದಾಳಿಯಲ್ಲಿ 26 ಜನ ಬಲಿಯಾಗಿದ್ದರು, ಇಡೀ ಘಟನೆಯಲ್ಲಿ ಯಾವೊಬ್ಬ ಹೆಣ್ಣು ಮಗಳನ್ನೂ ಕೊಲ್ಲದ ಉಗ್ರಗಾಮಿಗಳು ಕುಟುಂಬದ ಗಂಡಸರನ್ನೇ ಟಾರ್ಗೆಟ್ ಮಾಡಿದ್ದರು. ಮಹಿಳೆಯ ಹಣೆಯ ಮೇಲಿನ ಸಿಂಧೂರವನ್ನು ಕಸಿದಿದ್ದಾರೆ.
ಆಗಷ್ಟೇ ಮದುವೆಯಾಗಿ ಹನಿಮೂನ್‌ಗೆಂದು ಕಾಶ್ಮೀರಕ್ಕೆ ಬಂದಿದ್ದ ಉತ್ತರ ಪ್ರದೇಶದ ಕಾಲ್ಪುರ ಮೂಲದ ಶುಭಂ ದ್ವಿವೇದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಲ್ಲದೇ ವಾರದ ಹಿಂದಷ್ಟೇ ಮದುವೆಯಾಗಿ ಹನಿಮೂನ್‌ಗೆಂದು ಆಗಮಿಸಿದ್ದ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮೃತಪಟ್ಟಿದ್ದರು. ಕೈ ತುಂಬಾ ಬಳೆ ತೊಟ್ಟು ತನ್ನ ಗಂಡನ ಶವದ ಮುಂದೆ ಕಂಗೆಟ್ಟು ಕುಳಿತಿದ್ದ ವಿನಯ್ ಪತ್ನಿ ಹಿಮಾನಿಯ ಫೋಟೋ ಪಹಲ್ಗಾಮ್ ದಾಳಿಯ ಕ್ರೂರತೆಗೆ ಸಾಕ್ಷಿಯೆಂಬಂತೆ ಎಲ್ಲರನ್ನೂ ಕಾಡುತ್ತಿದೆ.
ಭಯೋತ್ಪಾದಕರ ದಾಳಿಯಲ್ಲಿ ಪತಿದೇವರನ್ನು ಕಳೆದುಕೊಂಡ ಹೆಣ್ಣುಮಕ್ಕಳ ಹಣೆಯಲ್ಲಿನ ಸಿಂಧೂರವೂ ಅಳಿಸಿಹೋಗಿದೆ. ಹೆಣ್ಣು ಮಕ್ಕಳ ಕುಂಕುಮ ಭಾಗ್ಯ ಕಸಿದ ಉಗ್ರರ ಹೇಯ ಕೃತ್ಯದ ವಿರುದ್ಧ ಸಿಡಿದೆದ್ದ ಭಾರತ ಇದೇ ಕಾರಣಕ್ಕೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿದ ಪತ್ರಿದಾಳಿಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲಾಗಿದೆಯಂತೆ.