Home News ಅಸತ್ಯದಿಂದ ಸತ್ಯದೆಡೆಗೆ ಪಯಣ

ಅಸತ್ಯದಿಂದ ಸತ್ಯದೆಡೆಗೆ ಪಯಣ

ಈಗ್ಗೆ ಕೆಲವು ವರ್ಷಗಳ ಮುಂಚೆ, ನಾನು ಸಂಚಾಲಕನಾಗಿರುವ ಸಾಮಾಜಿಕ ಜವಾಬ್ದಾರಿ ತಂಡದ ಸ್ವಯಂಸೇವಕಿಯೊಬ್ಬಳು, ನಾವು ಆ ಸಮಯದಲ್ಲಿ ಭೇಟಿ ಮಾಡಬೇಕೆಂದುಕೊಂಡಿರುವ ಆಶ್ರಮವೊಂದರ ಬಗ್ಗೆ ಪ್ರಸ್ತಾಪಿಸುತ್ತಾ, ಹೀಗೆಂದಳು: ಸರ್, ನನಗ್ಯಾಕೋ ಈ ಸಂಸ್ಥೆಯು ಮಾಡುವ ಕೆಲಸದ ಬಗ್ಗೆ ಅಷ್ಟೊಂದು ಗೌರವವಿಲ್ಲ, ಅವರು ಸಹಾಯ ಮಾಡುತ್ತಿರುವುದು ಕಳ್ಳತನ, ಕೊಲೆ, ಮಾಡಿ ಸೆರೆಮನೆ ವಾಸ ಅನುಭವಿಸುತ್ತಿರುವ ಕೈದಿಗಳ ಮಕ್ಕಳ ಆರೈಕೆಯನ್ನು. ದುಷ್ಟರಿಂದ ದೂರವಿರು ಎಂದ ಹಾಗೆ ನಾವ್ಯಾಕೆ ಅವರ ಮಕ್ಕಳಿಗೆ ಸಹಾಯ ಮಾಡಬೇಕು. ಅದರ ಬದಲು ಅದೇ ಸಂಪನ್ಮೂಲಗಳನ್ನು ಬೇರೆ ರೀತಿಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಕೊಡಬಹುದಲ್ಲ, ಅದೂ ಒಂದು ಒಳ್ಳೆಯ ಕೆಲಸವೇ ತಾನೇ ಎಂದಳು.
ಅವಳ ತರ್ಕವೂ ಸರಿಯಾಗಿಯೇ ಇತ್ತು. ಕಳ್ಳತನಕ್ಕೊಳಗಾದ ಮನೆಯ ಮಕ್ಕಳಿಗೆ ನಾವ್ಯಾರೂ ಸಾಂತ್ವನ ಮಾಡುವುದಿಲ್ಲ, ಅವರ ಬಂಧು-ಮಿತ್ರರು ಮಾಡಿರುತ್ತಾರಾದರೂ ಅದು, ಅವರ ಸಂಬಂಧದ ವಿಷಯ. ಆದರೆ ಅದೇ ಕಳ್ಳತನ ಮಾಡಿ ಸೆರೆಮನೆಗೆ ಹೋದ ಮಕ್ಕಳಿಗೆ, ಅವರಿದ್ದಲ್ಲಿಗೆ ಹೋಗಿ ಸಾಂತ್ವನ ಮಾಡಿ ಬರುತ್ತೇವೆ. ಸಂತ್ರಸ್ತರಿಗೆ ಸಾಂತ್ವನ, ವಿದ್ಯಾರ್ಥಿ-ಸ್ವಯಂ ಸೇವಕರಿಗೆ ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಹುಟ್ಟುಹಾಕುವುದು ಈ ತಂಡಕ್ಕಿರುವ ಅಲಿಖಿತ ಧ್ಯೇಯ ವಾಕ್ಯ. ನಮ್ಮ ಸಾಮಾಜಿಕ ಜವಾಬ್ದಾರಿ ತಂಡದವರು ಮಾಡಹೊರಟಿದ್ದೂ ಇದನ್ನೇ. ಎಲ್ಲವೂ ನಿಶ್ಚಯವಾಗಿತ್ತು. ಅವಳಿಗೆ ಹೀಗೆಂದೆ, “ನೀನು ಹೇಳುವುದೂ ಸರಿಯಾಗಿಯೇ ಇದೆ. ಆದರೂ ನೀನು ಈ ಸಮಯದಲ್ಲಿ ಇವರ ಸೇವೆಯನ್ನೇ ಮಾಡಬೇಕು. ಈಗಾಗಲೇ ಇದರ ನಿಷ್ಕರ್ಷೆ ಮುಗಿದಿದೆ, ಬದಲಾಯಿಸಲಾಗುವುದಿಲ್ಲ”.
“ಸರ್, ನನಗೆ ನೀವು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ, ನಾನು ಹೇಳುತ್ತಿರುವುದು ನೀವು ಹೇಳಿದುದರ ವಿರುದ್ಧವಾದುದು, ನನಗೆ ನೀವು ಹೇಳಿದ ಕೆಲಸ ಮಾಡಲು ಇಷ್ಟವಿಲ್ಲ, ಅದು ನನ್ನ ಮನಸ್ಸಾಕ್ಷಿಗೆ ಒಗ್ಗದ ವಿಚಾರ. ಬಹುಶಃ ನೀವು ಏನೋ ಒಂದನ್ನು ಹೇಳಿ ನನ್ನ ಬಾಯನ್ನು ಮುಚ್ಚಿಸುತ್ತೀರಾ, ಆದರೆ ನಾನು ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದಿಲ್ಲ”.
ನೋಡು ಕಾವ್ಯ (ಹೆಸರು ಬದಲಾಯಿಸಲಾಗಿದೆ), ನೀನು ಹೇಳಿದುದು ಕೂಡಾ ಸರಿಯಾಗಿಯೇ ಇದೆ. ಆದರೆ ಅದು ಪೊಲೀಸರ, ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವವರ ದೃಷ್ಟಿಕೋನ, ಅದು ಸಮಾಜ ಶಾಸ್ತ್ರಜ್ಞರ, ಕೆಲವು ಮಾಧ್ಯಮದವರ, ಜನಪದರ ಅಭಿಪ್ರಾಯ, ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂದು ಹೇಳುತ್ತೇವಲ್ಲ, ಹಾಗೆ. ಅಮ್ಮ ವೈದ್ಯೆಯಾಗಿದ್ದರೆ ಮಗಳೂ ವೈದ್ಯಳಾಗಬೇಕೆಂದು ನಿರೀಕ್ಷಿಸುವುದೂ, ಅಪ್ಪ ರಾಜಕೀಯದವನಾಗಿದ್ದರೆ ಮಗನೂ ರಾಜಕೀಯಕ್ಕೆ ಬರುತ್ತಾನೆ ಎನ್ನುವ ಕಲ್ಪನೆಯದು. ವಾಸ್ತವವಾಗಿ ಹಾಗೆ ನಿರೀಕ್ಷಿಸುವುದು ಒಳ್ಳೆಯ ಲಕ್ಷಣವಲ್ಲ, ಅದು ಬೌದ್ಧಿಕ ಪಕ್ಷಪಾತ. ಏಕೆಂದರೆ ಅಪ್ಪನ ಹಾದಿಯನ್ನೇ ಮಗನು ತುಳಿಯುತ್ತಾನೆ ಎನ್ನಲಿಕ್ಕಾಗುವುದಿಲ್ಲ, ಅಮ್ಮನಂತೆಯೇ ಮಗಳು ಆಗುತ್ತಾಳೆ ಎನ್ನುವಂತಿಲ್ಲ.
ಕೊನೆಗೆ, ಕಾವ್ಯ ಆಶ್ರಮಕ್ಕೆ ನಮ್ಮೊಟ್ಟಿಗೆ ಬರಲು ಒಪ್ಪಿದಳು. ಆಶ್ರಮದಲ್ಲಿ ಎಲ್ಲ ಮಕ್ಕಳೊಂದಿಗೆ ಅವಳು ಹೊಂದಿಕೊಂಡೇ ಹೋದಳು. ಯಾವ ಸಮಸ್ಯೆಯೂ ಕಾಣಿಸಲಿಲ್ಲ, ಆಮೇಲೆ ಒಂದು ವಾರದ ನಂತರ ಅವಳಿಗೆ ಬರಹೇಳಿ, ಅವಳ ಅಭಿಪ್ರಾಯ ಕೇಳಿದೆ. “ಸರ್, ಆ ಮಕ್ಕಳನ್ನು ನೋಡಿದಾಗ ನಿಜಕ್ಕೂ ಬೇಜಾರಾಗುತ್ತೆ. ಪಾಪ, ಯಾರೋ ಮಾಡಿದ ತಪ್ಪಿಗೆ ಇವರು ಕಷ್ಟ ಎದುರಿಸುತ್ತಿದ್ದಾರಲ್ಲ ಎಂದು”.
ಅದಕ್ಕೆ ನಾನು, ನೋಡಮ್ಮ, ಹೌದು, ನಿಜಕ್ಕೂ ಬೇಜಾರಾಗುತ್ತೆ, ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ, ಹಾಗಾಗಬಾರದು, ಆದರೆ ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ನಾಗರಿಕತೆಯ ವಿಕಾಸದ, ಔನ್ನತ್ಯದ ಮಾರ್ಗದಲ್ಲಿದ್ದೇವೆ, ಈ ಪ್ರಯಾಣವು ಹಂತ ಹಂತವಾಗಿ ಪರಿವರ್ತನೆಯಾಗುತ್ತಾ, ವಿಕಾಸವಾಗುತ್ತಾ ಹೋಗುತ್ತದೆ. ನಮ್ಮ ಪ್ರಯಾಣವಿನ್ನೂ ಪೂರ್ಣವಾಗಿಲ್ಲ. ಪಾಶವೀ ಮನಸ್ಸು ಕರಗಿ ಮಾನವ ಮನಸ್ಸು ಬಂದಿಲ್ಲ, ಅಸತ್ಯ, ಅನ್ಯಾಯ, ಅಧರ್ಮ ಮೊದಲಾಗಿ ಕರೆಸಿಕೊಳ್ಳುವ ಪಾಶವೀ ಮನಸ್ಸುಗಳಿಂದ, ಹೊರಬಂದಿಲ್ಲ. ಈ ನಾಗರಿಕತೆಯ ಉದ್ದೇಶಿತ ಪ್ರಯಾಣವನ್ನೇ ಉಪನಿಷತ್ಕಾರರು ಅಸತೋಮಾ ಸದ್ಗಮಯ' ಎಂದು ಕರೆದರು, ಅಸತ್ಯದಿಂದ ಸತ್ಯದೆಡೆಗೆ ನಮ್ಮ ಪಯಣ ಎಂದರು.ತಮಸೋಮಾ ಜ್ಯೋತಿರ್ಗಮಯ’ ಎಂದು ಆಶಿಸಿದರು. ಎಲ್ಲಿ ತಮಸ್ಸು ಅಂದರೆ ಕತ್ತಲು, ಕಾಣದೇ ಇರುವುದು. ಅಜ್ಞಾನವೂ ಕತ್ತಲಿನ ಹಾಗೆಯೇ, ಅದಕ್ಕೆ ಅರ್ಥವಾಗುವುದಿಲ್ಲ, ಎಲ್ಲಿ ಅಜ್ಞಾನ, ಕತ್ತಲು ಇರುತ್ತದೆಯೋ ಅಲ್ಲಿ ಅಸತ್ಯವೂ ಇರುತ್ತದೆ. ಜ್ಞಾನವೆಂಬ ಬೆಳಕು, ಕತ್ತಲಿನಲ್ಲಿ ಅಸತ್ಯದಿಂದ ಮರೆಮಾಚಿದ ಸತ್ಯವನ್ನು ಕಾಣುವಂತೆ, ಹೊರತೆಗೆಯುತ್ತದೆ. ಅಜ್ಞಾನ, ಅಸತ್ಯಗಳೆರಡೂ ಹೋಗಬೇಕು. ಅದಕ್ಕೆ ಜ್ಞಾನಯುಕ್ತವಾದ ಸತ್ಯವು ನ್ಯಾಯಯುತವಾದದ್ದು, ಅದು ನಮ್ಮೆಲ್ಲರ ಗುರಿ, ಆದರೆ ಅದನ್ನು ಇನ್ನೂ ತಲುಪಿಲ್ಲ, ತಲುಪುತ್ತೇವೋ ಇಲ್ಲವೋ ಗೊತ್ತಿಲ್ಲ, ಹಾಗೆ ತಲುಪಬೇಕೆನ್ನುವುದು ಉಪನಿಷತ್ಕಾರರ ಉದ್ದೇಶ, ಮಾನವತಾವಾದದ ಗುರಿ.
ನಾವು ಮಾಡುವ ಚಿಕ್ಕ ಚಿಕ್ಕ ಸೇವಾ ಕಾರ್ಯಗಳು ಆ ನಮ್ಮ, ಸತ್ಯದ ಗುರಿಯತ್ತ ನಮ್ಮನ್ನು ಕೊಂಡೊಯ್ಯುತ್ತವೆ. ಅದಕ್ಕೋಸ್ಕರವಾಗಿಯೇ ಅಂದು ನಾನು ನಿನಗೆ ಹೇಳಿದ್ದು, ನೀನು ಈ ಸೇವಾ ಕಾರ್ಯಕ್ಕೆ ಬರಲೇ ಬೇಕು ಅಂತ, ಹಾಗೆ ಬಂದಾಗ ಮಾತ್ರ ನಿನಗೆ, ನಿನ್ನಂತಹ ನೂರಾರು ವಿದ್ಯಾರ್ಥಿಗಳಿಗೆ ಅಸತ್ಯದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೂರು ಜನ ಮಾಡಿದ ಅನ್ಯಾಯ, ಅಸತ್ಯವನ್ನು ಇನ್ನೊಂದು ನೂರು ಜನ ನೋಡಿದಾಗ, ಅದರ ಪರಿಣಾಮಗಳನ್ನು ವಿಶ್ಲೇಷಿಸಿದಾಗ, ಹಾಗೆ ವಿಶ್ಲೇಷಿಸಿದ ನೂರು ಜನರಲ್ಲಿ ಒಂದು ಐವತ್ತು ಜನರಾದರೂ ‘ನಾವು ಎಂದೂ ಈ ತರಹದ ಅಸತ್ಯವನ್ನು ಮಾಡಬಾರದು, ಹಾಗೆ ಮಾಡಲು ಬೇರೆಯವರಿಗೂ ಅವಕಾಶ ಮಾಡಿಕೊಡಬಾರದು’ ಎಂಬ ನಿಲುವನ್ನು ತೆಗೆದುಕೊಳ್ಳುತ್ತಾರೆಂದು ನಾವು ಬಯಸುತ್ತೇವೆ. ಅ ಐವತ್ತು ಜನರಲ್ಲಿ ಒಂದು ಹತ್ತು ಜನ ವಿದ್ಯಾರ್ಥಿಗಳು, ಅಸತ್ಯದ ಪರಿಣಾಮಗಳನ್ನು ಅವರು ತಮ್ಮ ಮುಂದಿನ ಪೀಳಿಗೆಯವರಿಗೆ ಕಲಿಸುತ್ತಾರೆ ಮತ್ತು ಸತ್ಯವಾಗಿ, ನ್ಯಾಯಯುತವಾಗಿ ನಡೆದುಕೊಳ್ಳಲು ಇಚ್ಛಿಸುತ್ತಾರೆ. ಈ ಹತ್ತು ಜನರ ಪೀಳಿಗೆಯು ಹಾಗೆಯೇ ವಿಕಾಸವಾಗುತ್ತಾ ಒಂದು ಹೊಸ ಸಂಸ್ಕöÈತಿಯಾಗಿ ನಿಲ್ಲುತ್ತದೆ. ಆ ಹೊಸ ಸಂಸ್ಕöÈತಿಯಲ್ಲಿ ಎಲ್ಲರೂ ಎಲ್ಲ ಸಮಯದಲ್ಲಿಯೂ ಸತ್ಯವಾಗಿ, ನ್ಯಾಯಯುತವಾಗಿ ನಡೆದುಕೊಳ್ಳುತ್ತಾರೆ ಎಂಬುದು ಉಪನಿಷತ್ಕಾರರ ಸಿದ್ಧಾಂತ, ಇದು ಆಧುನಿಕ ವಿಕಸನೀಯ ಮನೋವಿಜ್ಞಾನದ ಊಹೆಯೂ ಹೌದು. ಎಂದು ಹೇಳಿ ನಿಲ್ಲಿಸಿದೆ.
ಸ್ವಲ್ಪ ಹೊತ್ತು ನನ್ನ ಮತ್ತು ಕಾವ್ಯಳ ನಡುವೆ ಮೌನವಿತ್ತು. ಆಮೇಲೆ, ನಿಟ್ಟುಸಿರು ಬಿಡುತ್ತಾ, “ಹೌದು, ನೀವು ಹೇಳುವುದು ಸರಿ” ಎಂದು ಹೇಳಿ ಹೊರಟಳು. ಅವಳು ಹೋಗುವಾಗ ಮೊದಲು ನಾನು ನೋಡಿದ ಕಾವ್ಯ ಆಗಿರಲಿಲ್ಲ, ಅವಳಲ್ಲಿ ಪರಿವರ್ತನೆಯಾಗಿತ್ತು, ಅದು ನನ್ನಿಂದಾದುದಲ್ಲ, ಅಸತ್ಯದ, ಅಸತ್ಯದ ಪರಿಣಾಮಗಳ ಅರಿವಿನಿಂದಾದ ಪರಿವರ್ತನೆ, ಅದು ಉಪನಿಷತ್ಕಾರರ ಉದ್ದೇಶ, ನನಗೂ ಅದು ಒಮ್ಮತವೇ.

Exit mobile version