ಹುಬ್ಬಳ್ಳಿ: ನಾಡಿನ ಮುತ್ಸದ್ದಿ ನಾಯಕರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಅವರ ತಾಯಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಹೆಸರಲ್ಲಿ ಸಾಧಕರಿಗೆ ಕೊಡಮಾಡುವ ಅವ್ವ ಪ್ರಶಸ್ತಿಯು ರಾಜ್ಯಕ್ಕೆ ಮಾದರಿಯಾದುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದರು.
ಇಲ್ಲಿನ ಗುಜರಾತ್ ಭವನದಲ್ಲಿ ಅವ್ವ ಸೇವಾ ಟ್ರಸ್ಟ್ ಆಯೋಜಿಸಿದ ಅವ್ವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅವ್ವ ಪ್ರಶಸ್ತಿ ಪುರಸ್ಕೃತರಿಗೆ ಮತ್ತಷ್ಟು ಹೊಣೆಗಾರಿಕೆ ಹೆಚ್ಚಾಗಿದೆ ಎಂದು ಹೇಳಿದರು.
ಜನರ ಶ್ರೆಯೋಭಿವೃದ್ಧಿಗೆ ಜನಸೇವಕನಾಗಿ ಶ್ರಮಿಸುತ್ತಿರುವ ಬಸವರಾಜ ಹೊರಟ್ಟಿ ಅವರಂತಹ ಪುತ್ರನಿಗೆ ಜನ್ಮ ನೀಡಿದ ತಾಯಿ ಗುರವ್ವ ಅವರು ನೀಡಿದ ಸಂಸ್ಕಾರ, ಶ್ರಮ ಎದ್ದು ಕಾಣುತ್ತದೆ. ಅ ಮಹಾತಾಯಿಯನ್ನು ಸ್ಮರಿಸೋಣ ಎಂದು ನುಡಿದರು.
ಸಾಧಕರನ್ನು ಗೌರವಿಸುವ ಮೂಲಕ ಧರ್ಮ ಮಾರ್ಗದ ಕಾರ್ಯಗಳ ಮೂಲಕ ತಾಯಿಯ ಸ್ಮರಣೆ ಮಾಡುವ ಹೊರಟ್ಟಿ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
8 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ದಾಖಲೆಯಾಗಿದೆ. ಇದಕ್ಕೆ ಕಾರಣ ಅವರ ವ್ಯಕ್ತಿತ್ವ, ಮಾಡಿದ ಸೇವೆ, ಬದ್ಧತೆ, ಸ್ನೇಹಮಯ ವ್ಯಕ್ತಿತ್ವ, ಜನಪರ ಕಾಳಜಿಯೇ ಕಾರಣ ಎಂದು ನುಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ 12 ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿ ಅಕ್ಷಯಾ ಗೋಖಲೆ ಅವರು ತಾಯಿಯ ಸ್ಥಾನ, ಸಂಸ್ಕಾರದ ಮಹತ್ವ ಕುರಿತು ವಿವರಿಸಿದರು.
ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಡಿ ವೇದಿಕೆಯಲ್ಲಿದ್ದರು. ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕ ಮಾತನಾಡಿದರು.
ಅವ್ವ ಪ್ರಶಸ್ತಿ-೨೦೨೪ರ ಪ್ರಶಸ್ತಿ ಪುರಸ್ಕೃತರು
ಕೃಷಿ ತಜ್ಞ, ಶಿಕ್ಷಣ ತಜ್ಞ, ಅಪರೂಪದ ರಾಜಕೀಯ ಮುತ್ಸದ್ದಿ ಎನ್.ಆರ್ ಪಾಟೀಲ (ಶಿವನಗೌಡ ರು ಪಾಟೀಲ), ಸಮಾಜಮುಖಿ ಚಿಂತನೆಯ, ಪ್ರಗತಿಶೀಲ ಮನಸ್ಸಿನ ಪತ್ರಕರ್ತ ಚಂದ್ರಕಾಂತ ವಡ್ಡು, ಸಾಹಿತಿ, ಕಥೆಗಾರ,ಅಧ್ಯಾಪಕ, ಸಂಶೋಧಕ ಮತ್ತು ವಾಗ್ನಿಗಳಾದ ಡಾ. ನಂಗಮನಾಥ ಲೋಕಾಪುರ, ಸಿತಾರ ವಾದನ ಮಾಂತ್ರಿಕ ಛೋಟೆ ರಹಮತ್ ಖಾನ್, ದಾಸವಾಣಿ, ಸಂತವಾಣಿ, ಅಭಂಗಗಳ ವಿಶಿಷ್ಟ ಗಾಯಕಿ ರೇಖಾ ಹೆಗಡೆ, ಕರಾವಳಿ ತೀರದ ಜಾನಪದ ಕಲಾ ತಜ್ಞ, ಯಕ್ಷಗಾನ ಕಲಾವಿದ ಕೇಶವ ಹೆಗಡೆ ಕೊಳಗಿ, ಉದ್ಯಮಿ, ಶಿಕ್ಷಣ ಪ್ರೇಮಿ, ಧಾರ್ಮಿಕ ಮಾನವತಾವಾದಿ ಮಹೇಂದ್ರಕುಮಾರ ಸಿಂಘಿ, ಬಸವಣ್ಣನವರ ತತ್ವಾದಶಕಗಳನ್ನು ವಿಶ್ವದರ್ಶನ ಮಾಡಿದ ಎಸ್ ಮಹದೇವಯ್ಯ, ಕಾನೂನು ಪದವೀಧರರು, ಸಮಾಜ ಸೇವಕಿ, ರಾಜಕೀಯ ಧುರಿಣೆ ರಾಜೇಶ್ವರಿ ವಿ ಪಾಟೀಲ, ಹಳ್ಳಿ ಸೊಗಡಿನ ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ, ಅಂತರರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪಡೆದ ವಿಶ್ವ ಸ್ಟೇಟ್ ಕ್ರೀಡಾಪಟು ತ್ರಿಶಾ ಪ್ರವೀಣ ಜಡಲಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕಗಳಿಸಿದ್ದ ಹಳ್ಳಿಯ ಬಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಬಡ ರೈತ ಕುಟುಂಬದ ಅಂಕಿತಾ ಬಪನ ಕೊಣೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.