Home ತಾಜಾ ಸುದ್ದಿ ಹೆಣ್ಣಿಗೆ ಹೋರಾಟದ ಮನೋಭಾವ ಬರಬೇಕು

ಹೆಣ್ಣಿಗೆ ಹೋರಾಟದ ಮನೋಭಾವ ಬರಬೇಕು

0

ಕಾನೂನು ಅರಿತಕೊಂಡಾಗಷ್ಟೇ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಕಡಿಮೆ ಆಗಲು ಸಾಧ್ಯ

ಮಂಡ್ಯ: ಹೆಣ್ಣಿಗೆ ಹೋರಾಟದ ಮನೋಭಾವ ಬರಬೇಕು. ವಜ್ರದಂತೆ ಕಠಿಣವಾಗಬೇಕು. ಕಾನೂನು ಅರಿತಕೊಂಡಾಗಷ್ಟೇ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಕಡಿಮೆ ಆಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ “ಸ್ತ್ರೀ ಎಂದರೆ ಅಷ್ಟೇ ಸಾಕೇ?” ವಿಷಯದ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಣ್ಣಿನ ಮೇಲಾಗುವ ದೌರ್ಜನ್ಯ, ಅಪಾರಧ ತಡೆಗೆ ನಮ್ಮಲ್ಲಿ ಕಠಿಣ ಕಾನೂನಿದೆ. ಆದರೆ ದೌರ್ಜನ್ಯ ಆದಾಗ ಕಾನೂನು ಹೋರಾಟಕ್ಕೆ ಹೆಣ್ಣು ಹಿಂದೇಟು ಹಾಕುತ್ತಿದ್ದಾಳೆ. ನಾನಾ ಒತ್ತಡಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂಜರಿಯುತ್ತಾಳೆ. ಎಲ್ಲಿಯವರೆಗೂ ಕಾನೂನು ಹೋರಾಟಕ್ಕೆ ಮುಂದಾಗುವುದಿಲ್ಲವೋ ಅಲ್ಲಿಯವರೆಗೆ ದೌರ್ಜನ್ಯ ಕಡಿಮೆ ಆಗುವುದಿಲ್ಲ ಎಂದರು.

ಹೆಣ್ಣಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲ ತುಂಬಿದ್ದು ಡಾ. ಬಿ.ಆರ್.ಅಂಬೇಡ್ಕರ್. ಸ್ತ್ರೀ ಚಳವಳಿ ಆರಂಭವಾಗಿದ್ದು ಬಸವಣ್ಣನವರ ಕಾಲದಲ್ಲಿ. ಹೆಣ್ಣಿಗೆ ಶಕ್ತಿ ನೀಡಬೇಕೆಂದರೆ ಅವಳಿಗೆ ವೇದಿಕೆ ಸಿಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಡಾ ಹೇಮಾ ಪಟ್ಟಣಶೆಟ್ಟಿ ಅವರು ಆಶಯ ನುಡಿಯಗಳನ್ನಾಡಿ, ಲೈಂಗಿಕತೆ ಶಿಕ್ಷಣ ಇಂದು ಅವಶ್ಯವಿದೆ. ಸಮಾಜದಲ್ಲಿ ಹೆಣ್ಣನ್ನು ನೋಡುವ ಮನೋಭಾವ ಬದಲಾಗಬೇಕು. ಮಹಿಳೆಯರ ಭಾವನೆ ಅರ್ಥಮಾಡಿಕೊಂಡು ಗೌರವಿಸುವ ಭಾವನೆ ಮೂಡಬೇಕು. ಸ್ತ್ರೀಯರಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂದರು.

ಗೋಷ್ಠಿಯಲ್ಲಿ ಭ್ರೂಣ ಹತ್ಯೆ ವಿಷಯದ ಬಗ್ಗೆ ಸುಮತಿ ಜಿ., ವರ್ತಮಾನದ ತಲ್ಲಣಗಳು ವಿಷಯದ ಬಗ್ಗೆ ಡಾ. ಶುಭಶ್ರೀ ಪ್ರಸಾದ್, ವಿವಾಹ ಮತ್ತು ಮರ್ಯಾದಾ ಹತ್ಯೆ ವಿಷಯದ ಬಗ್ಗೆ ಡಾ ತಾರಿಣಿ ಶುಭದಾಯಿನಿ ಅವರು ವಿಷಯ ಮಂಡನೆ ಮಾಡಿದರು.

Exit mobile version