Home ತಾಜಾ ಸುದ್ದಿ ಸಮಯಪ್ರಜ್ಞೆಯಿಂದ ಜೀವ ಉಳಿಸಿದ ಚಾಲಕ

ಸಮಯಪ್ರಜ್ಞೆಯಿಂದ ಜೀವ ಉಳಿಸಿದ ಚಾಲಕ

0

ಮಂಗಳೂರು: ಬ್ರೇಕ್ ಫೇಲ್ ಆದ ಬಸ್‌ನ್ನು ಚಾಲಕ ತನ್ನ ಚಾಕಚಕ್ಯತೆಯಿಂದ ನಿಯಂತ್ರಣಕ್ಕೆ ತಂದು ಪ್ರಯಾಣಿಕರ ಜೀವ ರಕ್ಷಣೆ ಮಾಡಿದ ಘಟನೆ ಗುರುವಾರ ಬೆಳಗ್ಗೆ ನಗರದ ಬಳ್ಳಾಲ್‌ಬಾಗ್‌ನಲ್ಲಿ ನಡೆದಿದೆ. ಚಾಲಕ ಸಿದ್ದಿಕ್ ಎರ್ಮಾಳ್ ಅವರ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಉಡುಪಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಶಾಲ್ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ಸು ಬೆಳಗ್ಗೆ ೮ ಗಂಟೆ ವೇಳೆಗೆ ನಗರದ ಬಳ್ಳಾಲ್‌ಬಾಗ್‌ಗೆ ಬರುತ್ತಿದ್ದಂತೆ ಹಠಾತ್ತನೆ ಬ್ರೇಕ್ ಫೇಲ್ ಆಗಿದೆ. ಬೆಳಗಿನ ಹೊತ್ತಾಗಿದ್ದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಬ್ರೇಕ್ ಫೇಲ್ ಆದ ತಕ್ಷಣ ಚಾಲಕ ಸಿದ್ದಿಕ್ ಎರ್ಮಾಳ್ ತಡ ಮಾಡದೆ ಬಸ್ಸನ್ನು ಫುಟ್‌ಪಾತ್ ಮೇಲೆ ಏರಿಸಿ, ಗೇರ್‌ಗಳ ಮೂಲಕ ಬಸ್‌ನ್ನು ಹತೋಟಿಗೆ ತಂದು ಯಾವುದೇ ಸಣ್ಣ ಗಾಯವೂ ಆಗದಂತೆ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಸ್ವಲ್ಪ ವಿಳಂಬವಾಗಿದ್ದರೂ ದೊಡ್ಡ ಮಟ್ಟದ ಅಪಘಾತ, ಸಾವು- ನೋವಿಗೆ ಕಾರಣವಾಗುವ ಸಂಭವವಿತ್ತು.
ಬಸ್‌ ನಿಂತ ಬಳಿಕ ತಮ್ಮ ಜೀವ ರಕ್ಷಣೆ ಮಾಡಿದ ಚಾಲಕ ಸಿದ್ದಿಕ್ ಅವರ ಸಮಯಪ್ರಜ್ಞೆ ಹಾಗೂ ಕಾರ್ಯಕ್ಷಮತೆಗೆ ಬಸ್ಸಿನ ಪ್ರಯಾಣಿಕರು ಕೃತಜ್ಞತೆ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಪ್ರಯಾಣಿಕರನೇಕರು ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿ ಶ್ಲಾಘಿಸಿದ್ದು, ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version