ಹುಬ್ಬಳ್ಳಿ: ಇಲ್ಲಿನ ವಿವೇಕಾನಂದ ಆಸ್ಪತ್ರೆಯಲ್ಲಿ ಫೆ.೯ರಂದು ತ್ರಿವಳಿ ಮಕ್ಕಳ ಜನನವಾಗಿದೆ. ಧಾರವಾಡದ ರೇಖಾ ನಾದೂರ ಅವರು ಸಹಜ ಹೆರಿಗೆಯಲ್ಲಿ ಈ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ.
ತ್ರಿವಳಿಗಳಲ್ಲಿ ಒಂದು ಹೆಣ್ಣು, ಎರಡು ಗಂಡು ಮಕ್ಕಳಿವೆ. ತಾಯಿ ಮತ್ತು ಮೂರು ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಹೆರಿಗೆ ಪ್ರಕರಣ ಅತ್ಯಂತ ಕ್ಲಿಷ್ಟವಾಗಿತ್ತು. ಆದರೆ, ನಮ್ಮ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಸುನೀತಾ ಟಂಕಸಾಲಿ ಹಾಗೂ ಮಕ್ಕಳ ತಜ್ಞರಾದ ಡಾ.ವೀರಣ್ಣ ಮುಧೋಳ ಅವರ ನೇತೃತ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗ ನೆರವಿನೊಂದಿಗೆ ತ್ರಿವಳಿಗೆ ರೇಖಾ ಅವರು ಜನ್ಮ ನೀಡಿದ್ದಾರೆ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.
ಮೊದಲ ಮಗು ಹೆಣ್ಣುಮಗುವಾಗಿದ್ದು ೨.೬ ಕೆ.ಜಿ ತೂಕವಿದೆ. ೨ನೇ ಮಗು ಗಂಡು ಮಗುವಾಗಿದ್ದು ೨.೩ ಕೆ.ಜಿ ತೂಕವಿದೆ. ೩ನೇ ಮಗುವೂ ಗಂಡು ಮಗುವಾಗಿದ್ದು, ೨ ಕೆ.ಜಿ ತೂಕವಿದೆ. ಮೂರು ಶಿಶುಗಳು ಆರೋಗ್ಯವಾಗಿದ್ದು, ನಿಗಾಘಟಕದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.