Home ತಾಜಾ ಸುದ್ದಿ ವಿಮಾನ ದುರಂತ ಸ್ಥಳಕ್ಕೆ ನರೇಂದ್ರ ಮೋದಿ ಭೇಟಿ

ವಿಮಾನ ದುರಂತ ಸ್ಥಳಕ್ಕೆ ನರೇಂದ್ರ ಮೋದಿ ಭೇಟಿ

0

ಅಹಮದಾಬಾದ್: ನಿನ್ನೆ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.
ಹೊಸದಿಲ್ಲಿಯಿಂದ ಅಹಮದಾಬಾದ್‌ಗೆ ಬಂದಿಳಿದ ಪ್ರಧಾನಿ ಮೋದಿ, ಸರ್ದಾರ್‌ ವಲ್ಲಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಅದಕ್ಕೂ ಮುನ್ನ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು, ನಂತರ ದುರಂತದ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಧಾನಿ ಮೋದಿ ಅವರಿಗೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಸಾಥ್‌ ನೀಡಿದರು.ಅಪಘಾತ ಸಂಭವಿಸಿದ ಬಳಿಕ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಅವರನ್ನು ತಕ್ಷಣ ಅಹಮದಾಬಾದ್‌ಗೆ ತೆರಳುವಂತೆ ಸೂಚನೆ ನೀಡಿದ್ದರು.ಇದೀಗ ಖುದ್ದು ಅಪಘಾತ ಸ್ಥಳಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಗುರುವಾರ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಇಲ್ಲಿನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅವಘಡ ಸಂಭವಿಸಿದ್ದು, ಒಟ್ಟಾರೆ 265 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ವಾಯು ದುರಂತ ಇದಾಗಿದೆ.

Exit mobile version