Home ತಾಜಾ ಸುದ್ದಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪ್ರಕರಣ: ಅಧಿಕಾರಿಗಳ ವಿರುದ್ಧ ಬ್ರಾಹ್ಮಣ ಸಮಾಜ ಆಕ್ರೋಶ

ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪ್ರಕರಣ: ಅಧಿಕಾರಿಗಳ ವಿರುದ್ಧ ಬ್ರಾಹ್ಮಣ ಸಮಾಜ ಆಕ್ರೋಶ

0

ದಾವಣಗೆರೆ: ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪೊಲೀಸರಿಗೆ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಂದೆ ಈ ಧೈರ್ಯ ಏಕೆ ಇರಲಿಲ್ಲ, ಈ ಸರ್ಕಾರಕ್ಕೆ ಬ್ರಾಹ್ಮಣ ಶಾಪ ತಟ್ಟಲಿದೆ ಎಂದು ಬ್ರಾಹ್ಮಣ ಸಮಾಜದ ಬಾಂಧವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ಬ್ರಾಹ್ಮಣ ಸಮಾಜ ಸೇವಾ ಸಂಘ ಮತ್ತು ದಾವಣಗೆರೆ ವಿಪ್ರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಒಳಭಾಗಕ್ಕೆ ತೆರಳುವಾಗ ತಪಾಸಣಾ ಸಮಯದಲ್ಲಿ ಸಿಬ್ಬಂದಿಗಳು ಬ್ರಾಹ್ಮಣ ವಿದ್ಯಾರ್ಥಿಗಳು ಗಾಯತ್ರಿ ದೀಕ್ಷೆ ಪಡೆದ ಜನಿವಾರ ತೆಗೆಸಿದ್ದಾರೆ. ಅಲ್ಲದೇ ಬೀದರ್ ಪರೀಕ್ಷಾ ಕೇಂದ್ರದಲ್ಲಿ ಇದೇ ಕಾರಣಕ್ಕೆ ವಿದ್ಯಾರ್ಥಿ ಪರೀಕ್ಷೆಯನ್ನೇ ಬರೆಯದೆ ಭವಿಷ್ಯವೇ ಮಂಕಾಗಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿದೆ. ಈ ರೀತಿ ಗಾಯತ್ರಿ ಮಂತ್ರ ದೀಕ್ಷೆ ಪಡೆದು ಆತ್ಮಸಾಕ್ಷಾತ್ಕಾರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ, ತೆಗೆಯಲು ಒತ್ತಾಯಿಸಿದ ಅವಮಾನಕಾರಿ ಘಟನೆಯನ್ನು ಖಂಡಿಸಿದರು.
ವರ್ಷಪೂರ್ತಿ ಶ್ರಮಪಟ್ಟು ಅಧ್ಯಯನ ಮಾಡಿ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃತ್ಯ ಈಗಲೂ ಮುಂದುವರೆದಿರುವುದು ಕಳವಳಕಾರಿ. ಧರ್ಮದ್ರೋಹಿ ಅಧಿಕಾರಿಗಳು ಎಷ್ಟೇ ಅಪಮಾನ ಮಾಡಿದರೂ ಬ್ರಾಹ್ಮಣ ಸಮಾಜ ಪ್ರಾಣವನ್ನು ಪಣಕ್ಕಿಟ್ಟು ಧರ್ಮ ರಕ್ಷಣೆ ಮಾಡಲಿದೆ. ಅದಕ್ಕಾಗಿ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ ಎಚ್ಚರಿಸಿದರು.
ರಾಜ್ಯ ಸರ್ಕಾರವು ತಕ್ಷಣ ಹಿಂದು ಪರಂಪರೆಯ ಸಂಸ್ಕಾರವಾದ ಗಾಯತ್ರಿ ಮಂತ್ರ ದೀಕ್ಷೆಯ ಪ್ರಾಮುಖ್ಯತೆ, ಘನತೆ, ಗೌರವ ಗೊತ್ತಿಲ್ಲದ ಧರ್ಮ ವಿರೋಧಿ ಕೃತ್ಯ ಎಸಗಿರುವ ಹೀನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂಥ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ.ಸಿ.ಕೆ.ಆನಂದತೀರ್ಥಾಚಾರ್, ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎಂ.ಸಿ.ಶಶಿಕಾಂತ್, ನಿರ್ದೇಶಕರಾದ ಡಿ.ಶೇಷಾಚಲ, ಭಾಸ್ಕರ್ ಗಜಾನನ ಭಟ್, ಪಿ.ಸಿ.ಶ್ರೀನಿವಾಸ್ ಸೇರಿದಂತೆ ಬ್ರಾಹ್ಮಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಬಾಂಧವರು ಭಾಗವಹಿಸಿದ್ದರು.

Exit mobile version