ಮೈಸೂರು: ರಾಜ್ಯದಲ್ಲಿ ಲಂಚದ ಪ್ರಮಾಣ ಶೇ. ೬೦ ತಲುಪಿದೆ. ಅಷ್ಟು ಪ್ರಮಾಣದ ಲಂಚ, ಕಮಿಷನ್ ವಸೂಲಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್ಯದ ಗುತ್ತಿಗೆದಾರರ ಪರಿಸ್ಥಿತಿ ಶೋಚನೀಯವಾಗಿದೆ. ಇವತ್ತಿನ ಪರಿಸ್ಥಿತಿ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಕಾಂಗ್ರೆಸ್ ಪರವಾಗಿರುವ ಗುತ್ತಿಗೆದಾರರು. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ, ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನೆಪ ಹುಡುಕುತ್ತಿದೆ ಎಂದು ದೂರಿದರು.
ಇದೇ ವೇಳೆ, ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಗಳನ್ನು ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ನೀವೇ ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಮತ ಕೊಟ್ಟು ಅಧಿಕಾರ ನೀಡಿದ ಜನರಿಂದ ಅವುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಮಾಂಸ ತಿನ್ನುವವರು ಎಷ್ಟೇ ದರ ಏರಿಕೆಯಾದರೂ ತಿನ್ನುತ್ತಾರೆ, ಬಸ್ ದರ ಏರಿಕೆಗೆ ಏಕೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಎಲ್ಲಾದರೂ ಉಂಟೆ, ಮಕ್ಕಳ ಆಸೆ ತೀರಿಸಲು ಕುಟುಂಬದವರು ಎಷ್ಟು ಕಷ್ಟ ಪಡುತ್ತಾರೆ ಎಂಬುದು ಇವರಿಗೆ ಅರಿವಿಲ್ಲ ಎಂದು ಕಿಡಿಕಾರಿದರು.
ಅಪೌಷ್ಠಿಕತೆಯಿಂದ ಮಕ್ಕಳ ಪರಿಸ್ಥಿತಿ ಏನಾಗಿದೆ ಎಂಬುದು ಅವರಿಗೇ ಅರಿವಾಗುತ್ತದೆ. ಇನ್ನು ವಿರೋಧ ಪಕ್ಷ ವಿಫಲವಾಗಿದೆಯೇ ಎಂಬ ಪ್ರಮಾಣಪತ್ರ ನಾನು ನೀಡಬೇಕಾಗಿಲ್ಲ ಎಂದರು.