Home ತಾಜಾ ಸುದ್ದಿ ಮಹಿಳಾ ಪ್ರಯಾಣಿಕರ ಲೆಕ್ಕ ತಪ್ಪಿಸುವ ಕೆಲಸ: ಸರ್ಕಾರದ ಬೊಕ್ಕಸಕ್ಕೆ ಹೊರೆ

ಮಹಿಳಾ ಪ್ರಯಾಣಿಕರ ಲೆಕ್ಕ ತಪ್ಪಿಸುವ ಕೆಲಸ: ಸರ್ಕಾರದ ಬೊಕ್ಕಸಕ್ಕೆ ಹೊರೆ

0

ಪ್ರಕಾಶ ಚಳಗೇರಿ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರಕಾರದ ಮೊದಲ ಗ್ಯಾರಂಟಿ ಯೋಜನೆಯಾಗಿ ಜಾರಿಯಾಗಿರುವ ಶಕ್ತಿ ಯೋಜನೆ'ಯ ಶಕ್ತಿಯನ್ನು ಕುಂದಿಸುವ ಕೆಲಸ ನಡೆದಿದೆ. ಶಕ್ತಿ ಯೋಜನೆಗೆ ಶಕ್ತಿ ತುಂಬಬೇಕಾದವರೇ ಈ ಕೆಲಸ ಮಾಡಲು ಮುಂದಾಗಿದ್ದಾರೆ. ಸರಕಾರ ಮಹಿಳಾ ಸಬಲೀಕರಣದ ಉದ್ದೇಶದಿಂದ ರಾಜ್ಯದ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣದಶಕ್ತಿ ಯೋಜನೆ’ ಜಾರಿ ಮಾಡಿದೆ. ಇಲ್ಲಿ ಮಹಿಳೆಯರು ಕೂಡ ಟಿಕೆಟ್‌ನ್ನು ಪಡೆಯಬೇಕು. ಆದರೆ ಯಾರೂ ಅದಕ್ಕೆ ದುಡ್ಡು ಕೊಡುವಹಾಗಿಲ್ಲ. ಅದಕ್ಕಾಗಿ ಶೂನ್ಯ ಟಿಕೆಟ್ ನೀಡಲಾಗುತ್ತದೆ. ಅದು ಏತಕ್ಕಾಗಿ ಎಂದರೆ, ಎಷ್ಟು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂಬ ಲೆಕ್ಕಕ್ಕಾಗಿ. ಆದರೆ ಇಲ್ಲಿಯೇ ಲೆಕ್ಕ ತಪ್ಪಿಸುವ ಕೆಲಸ ನಡೆದಿದೆ…!
ಮಹಿಳಾ ಪ್ರಯಾಣಿಕರು ಬಸ್ ಏರಿದರೆ ಸಾಕು ಅವರ ಕೈಗೆ ಲೆಕ್ಕ ಬಿಟ್ಟು ಟಿಕೆಟ್ ಇಡುವುದಷ್ಟೇ ಕೆಲಸ ಮಾಡುತ್ತಿದ್ದಾರೆ ಕೆಲ ನಿರ್ವಾಹಕರು. ಒಬ್ಬೇ ಒಬ್ಬ ಮಹಿಳೆ ಪ್ರಯಾಣ ಮಾಡುತ್ತಿದ್ದರೂ ಅವಳ ಕೈಗೆ ೨-೩ ಜನರ ಟಿಕೆಟ್ ನೀಡುತ್ತಾರೆ. ನಾನು ಒಬ್ಬಳೇ ಇದ್ದೇನೆ ಎಂದು ಮಹಿಳೆ ಹೇಳಿದರೂ ಕೂಡಾ ಇರಲಿ ಬಿಡಿ. ಟಿಕೆಟ್ ತಗೊಳ್ಳಿ ಎಂದು ಬೇಕಾಬಿಟ್ಟಿ ಟಿಕೆಟ್ ನೀಡುತ್ತಾರೆ. ಇದಕ್ಕೆ ಮಹಿಳೆಯರೂ ಕೂಡ ನಾವೇನೂ ದುಡ್ಡು ಕೊಡಬೇಕಿಲ್ಲ ಬಿಡು, ಎಷ್ಟು ಜನರದ್ದು ಕೊಟ್ಟರೇನಂತೆ ಫ್ರೀ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ಟಿಕೆಟ್ ಲೆಕ್ಕ ಮಾತ್ರ ಸರ್ಕಾರದ ಬೊಕ್ಕಸಕ್ಕೆ ಹೊರೆ ಎಂಬುದು ಅವರಿಗೆ ತಿಳಿದಿಲ್ಲ.
ಪಾಸ್ ಇದ್ದವರಿಗೂ ಶೂನ್ಯ ಟಿಕೆಟ್
ಎಷ್ಟೋ ಜನ ಮಹಿಳೆಯರು ಶಕ್ತಿ ಯೋಜನೆ ಜಾರಿಗೂ ಮುನ್ನವೇ ತಿಂಗಳ ಬಸ್ ಪಾಸ್‌ಗಳನ್ನು ಪಡೆದಿದ್ದಾರೆ. ಪಾಸ್ ಅವಧಿ ಇನ್ನೂ ಮುಕ್ತಾಯವಾಗಿಲ್ಲ. ಅವರೆಲ್ಲರೂ ಇಂದಿಗೂ ಬಸ್‌ಗಳಲ್ಲಿ ಪಾಸ್ ಮೂಲಕವೇ ಪ್ರಯಾಣ ಮಾಡುತ್ತಾರೆ. ಆದರೆ, ಅವರಿಗೂ ಕೂಡ ನಿರ್ವಾಹಕರು ಶೂನ್ಯ ಟಿಕೆಟ್ ನೀಡುತ್ತಾರೆ. ದುಡ್ಡು ಕೊಟ್ಟು ಪಾಸ್ ಪಡೆದು ಸಂಚರಿಸುವವರಿಗೆ ಏಕೆ ಶೂನ್ಯ ಟಿಕೆಟ್? ಅವರೆಲ್ಲ ಮುಂಗಡವಾಗಿ ಹಣ ಕೊಟ್ಟಿದ್ದಾರೆ ಅಲ್ಲವೇ? ಆದರೂ ನಿರ್ವಾಹಕರು ಟಿಕೆಟ್ ಕೊಡುತ್ತಿರುವುದು ಏತಕ್ಕೆ ಎಂಬುದಕ್ಕೆ ಉತ್ತರ ಸಿಗದಾಗಿದೆ. ನಿಮ್ಮ ಬಳಿ ಪಾಸ್ ಇದ್ದರೇನಂತೆ ಟಿಕೆಟ್ ತಗೊಳ್ಳಿ ಎಂದು ಪಾಸ್ ಉಳ್ಳ ಪ್ರಯಾಣಿಕರಿಗೆ ನೀಡುತ್ತಿದ್ದಾರೆ ಎಂದು ಪಾಸ್ ಹೊಂದಿರುವ ಪ್ರಯಾಣಿಕರು ಹೇಳುವ ಮಾತು.
ಶಕ್ತಿ ಯೋಜನೆಯ ಆರಂಭದ ದಿನಗಳಿಂದಲೂ ಮಹಿಳೆಯರೂ ನಿರೀಕ್ಷೆ ಮೀರಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂಬುವುದೂ ನಿಜ. ಆದರೆ, ಲೆಕ್ಕದಲ್ಲಿ ವ್ಯತ್ಯಾಸ ಮಾಡುತ್ತಿರುವುದು ಕೂಡ ಅಷ್ಟೇ ಸಲೀಸಾಗಿ ನಡೆದಿದೆ. ಸರಿಯಾಗಿ ಸರಕಾರಕ್ಕೆ ಮಾಹಿತಿ ನೀಡಬೇಕಾದ ಸಾರಿಗೆ ಸಂಸ್ಥೆಯ ಸಿಬ್ಬಂದಿಯೇ ದಾರಿ ತಪ್ಪಿಸುವ ಕೆಲಸ ಮಾಡಿದರೆ ಹೇಗೆ? ರಾಮನ ಲೆಕ್ಕ-ಕೃಷ್ಣನ ಲೆಕ್ಕ ಎನ್ನುವ ಹಾಗೇ ಒಂದಕ್ಕೆ ಮತ್ತೊಂದು ಎನ್ನುವಂತೆ ಬೇಕಾಬಿಟ್ಟಿ ಶೂನ್ಯ ಟಿಕೆಟ್ ನೀಡುವ ಮೂಲಕ ಶಕ್ತಿ ಕುಂದಿಸುವ ಕೆಲಸ ನಡೆದಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಉಂಟಾಗುತ್ತಿದೆ.

Exit mobile version