ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಮೇಲೆ ಮರಾಠಿ ಪುಂಡರು ಬಾಟಲಿ ತೂರಾಟ ನಡೆಸಿದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯಲ್ಲಿ ಶುಕ್ರವಾರ ನಡೆದಿದೆ.
ಹೋಳಿ ಬಣ್ಣ ಎರಚುವ ವೇಳೆ ಬಸ್ ಹಾಗೂ ಇತರ ವಾಹನಗಳಿಗೆ ಬೂದಿ ತುಂಬಿದ ಬಾಟಲಿ ಎಸೆದಿದ್ದಾರೆ. ಸಾರಿಗೆ ಬಸ್ ಇಚಲಕರಂಜಿಯಿಂದ ಚಿಕ್ಕೋಡಿಗೆ ತೆರಳುತ್ತಿತ್ತು. ಬಸ್ಸಿನಲ್ಲಿದ್ದವರನ್ನು ತಕ್ಷಣವೇ ಬಸ್ಸಿನಿಂದ ಇಳಿಸಿ ಕಾಪಾಡಲಾಗಿದೆ. ಘಟನೆಯಲ್ಲಿ ಬಸ್ನ ಗಾಜು ಪುಡಿಪುಡಿಯಾಗಿದ್ದು ಬಸ್ಗೆ ಹಾನಿಯಾಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ೨೫ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.
ಇತ್ತೀಚೆಗೆ ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಇದೇ ಕಾರಣಕ್ಕೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ಗಳನ್ನು ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದರು. ಅಲ್ಲದೇ ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದಿದ್ದರು. ಇಷ್ಟೇ ಅಲ್ಲದೇ ಮಹಾರಾಷ್ಟ್ರದ ಪುಣೆಯ ಸ್ವಾರಗೇಟ್ನಲ್ಲಿ ಕೆಎಸ್ಆರ್ಟಿಸಿ ಅಂಬಾರಿ ಬಸ್ ಮೇಲೆ ಕಪ್ಪು ಮಸಿ ಬಳಿದು, ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದರು.
ಕಾರಣ ಭಾಷಾ ದ್ವೇಷವಲ್ಲ:
ಕೊಲ್ಲಾಪುರದ ಇಚಲಕರಂಜಿಯಲ್ಲಿ ಸಾರಿಗೆ ಬಸ್ ಮೇಲೆ ಬಾಟಲಿ ತೂರಿದ ಘಟನೆಗೆ ಭಾಷಾ ವೈಷಮ್ಯ ಕಾರಣವಲ್ಲ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಇಚಲಕರಂಜಿ ಪೊಲೀಸರು ದೂರು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.