ಕಲಬುರಗಿ: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಕಲಬುರಗಿಯವರೊಂದಿಗೆ ಬೀಗತನ(ನೆಂಟಸ್ತಿಕೆ) ಬೆಳೆಸಿದ್ದಾರೆ. ಎರಡೂವರೆ ದಶಕಗಳ ಹಿಂದೆ ಕಲಬುರಗಿಯ ಉದ್ಯಮಿ, ವೀರಶೈವ-ಲಿಂಗಾಯತ ಸಮಾಜದ ಮುಖಂಡ ಶಿವಾನಂದ ಮಾನಕರ್ ಅವರ ಪುತ್ರಿಯೊಂದಿಗೆ ತಮ್ಮ ದ್ವಿತೀಯ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಅವರ ವಿವಾಹ ನೆರವೇರಿಸಿದ್ದ ಯಡಿಯೂರಪ್ಪ ಅವರು ಇದೀಗ ತಮ್ಮ ಮೊಮ್ಮಗನಿಗೂ ಕಲಬುರಗಿ ಕನ್ಯೆಯೊಂದಿಗೆ ವಿವಾಹ ನಿಶ್ಚಯಿಸಿದ್ದಾರೆ.
ಯಡಿಯೂರಪ್ಪ ಅವರು ಈಗ ಈ ಭಾಗದ ಆರಾಧ್ಯದೈವ, ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದೊಂದಿಗೇ ಬೀಗತನ ಬೆಳೆಸಿ ಕಲಬುರಗಿಯೊಂದಿಗಿನ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಯಡಿಯೂರಪ್ಪ ಅವರ ಹಿರಿಯ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಹಿರಿಯ ಪುತ್ರ ಸುಭಾಷ್ ಮದುವೆಯನ್ನು ಶರಣ ಸಂಸ್ಥಾನದ ಲಿಂಗರಾಜ ಬಸವರಾಜ ಅಪ್ಪ ಅವರ ದ್ವಿತೀಯ ಪುತ್ರಿ ಕು. ಶ್ರವಣಾ ಜೊತೆ ನಿಶ್ಚಯಿಸಿದ್ದಾರೆ.
ಇದೇ ಮಾರ್ಚ್ ೨೪ರಂದು ನಗರದ ನಾಗನಹಳ್ಳಿ ರಸ್ತೆಯಲ್ಲಿರುವ ಝಸ್ಟ್ ಕ್ಲಬ್‌ನಲ್ಲಿ ಸುಭಾಷ್ ಮತ್ತು ಶ್ರವಣಾ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ಆಯೋಜಿಸಲಾಗಿದೆ.