ಮಕ್ಕಳ ಮನಸ್ಸು ಮೃದು. ಅದು ಎಲ್ಲವನ್ನೂ ಗ್ರಹಿಸುವ ಶಕ್ತಿ ಹೊಂದಿರುತ್ತದೆ. ಮಕ್ಕಳಲ್ಲಿ ಸಂಕುಚಿತ ಮನೋಭಾವ ಬೆಳೆಸಿದಲ್ಲಿ ಅವರ ಬೆಳವಣಿಗೆಗೆ ನಾವೇ ಬೇಲಿ ಹಾಕಿದಂತೆ.
ಶಿಕ್ಷಣದಲ್ಲಿ ರಾಜಕೀಯಕ್ಕೆ ಅವಕಾಶ ಇರಬಾರದು. ಹಿಂದೆ ಪಠ್ಯಪುಸ್ತಕ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞರು ತೀರ್ಮಾನ ಕೈಗೊಳ್ಳುತ್ತಿದ್ದರು. ಸರ್ಕಾರ ತಲೆಹಾಕುತ್ತಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರದ ಹಸ್ತಕ್ಷೇಪ ತಾರಕಕ್ಕೇರಿತು. ಅದುವರೆಗೆ ಬಳಸುತ್ತಿದ್ದ ಪಠ್ಯಕ್ರಮವನ್ನು ಸಂಪೂರ್ಣವಾಗಿ ಬದಲಿಸಿದ್ದು ವಿವಾದಕ್ಕೆ ಕಾರಣವಾಯಿತು. ಮಕ್ಕಳು ಏನು ಓದಬೇಕು, ಯಾವುದು ಓದುವ ಅಗತ್ಯವಿಲ್ಲ ಎಂಬುದನ್ನು ಶಿಕ್ಷಣ ತಜ್ಞರು ತೀರ್ಮಾನಿಸಬೇಕು ಎಂಬುದನ್ನು ಬದಲಿಸಿ ಶಿಕ್ಷಣ ತಜ್ಞರ ಹೆಸರಿನಲ್ಲಿ ಬೇರೆ ಪಠ್ಯಗಳನ್ನು ಮಕ್ಕಳ ಮೇಲೆ ಹೇರುವ ಕೆಲಸ ನಡೆಯಿತು. ಈ ವಿಚಾರದಲ್ಲಿ ಶಿಕ್ಷಣ ತಜ್ಞರಲ್ಲೇ ವಿಭಿನ್ನ ಅಭಿಪ್ರಾಯಗಳು ಮೂಡಿದವು. ಈ ರೀತಿ ಪಠ್ಯಕ್ರಮ ಗೊಂದಲದಲ್ಲಿದ್ದಾಗ ವಿಧಾನಸಭೆಗೆ ಚುನಾವಣೆ ನಡೆಯಿತು. ಹೊಸ ಸರ್ಕಾರ ಹೊಸ ಶಿಕ್ಷಣ ಸಚಿವರು ಅಧಿಕಾರಕ್ಕೆ ಬಂದರು. ಮಕ್ಕಳ ಪಠ್ಯಕ್ರಮ ಮತ್ತೆ ವಿವಾದಕ್ಕೆ ಒಳಗಾಯಿತು.
ಈಗಾಗಲೇ ಓದುತ್ತಿರುವ ಪಠ್ಯದಲ್ಲಿ ಕೆಲವನ್ನು ಈಗಿನ ಸರ್ಕಾರ ಕೈಬಿಟ್ಟಿದೆ. ೪ ರಿಂದ ೧೦ ನೇ ತರಗತಿಯವರೆಗೆ ಕನ್ನಡ ಮತ್ತು ಸಮಾಜಶಾಸ್ತ್ರದಲ್ಲಿ ಬದಲಾವಣೆಗಳನ್ನು ಹೊಸ ಸರ್ಕಾರ ಜಾರಿಗೆ ತಂದಿದೆ. ಹಳೆ ಪುಸ್ತಕದಲ್ಲಿ ಕೆಲವನ್ನು ಕೈಬಿಡಲಾಗಿದೆ. ಇದರ ಬಗ್ಗೆ ಶಿಕ್ಷಕರಿಗೆ ಕಿರುಹೊತ್ತಗೆಯನ್ನು ಝೆರಾಕ್ಸ್ ಮಾಡಿ ಒದಗಿಸಿದೆ. ಮಕ್ಕಳಿಗೆ ಇದು ಲಭ್ಯವಿಲ್ಲ. ಶಾಲೆಯ ಸಂಚಿತ ನಿಧಿಯನ್ನು ಇದಕ್ಕೆ ಬಳಸಿಕೊಳ್ಳಿ ಎಂದು ಶಿಕ್ಷಣ ಇಲಾಖೆ ಹೇಳಿದೆ. ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಮಕ್ಕಳೇ ಝೆರಾಕ್ಸ್ ಮಾಡಿಕೊಳ್ಳಬೇಕು ಎಂದರೆ ಅವರ ಪೋಷಕರ ಬಳಿ ಹಣ ಇರುವುದಿಲ್ಲ. ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕರು ಬಡವರು. ಸರ್ಕಾರದ ಕೈಯಲ್ಲೇ ಹಣವಿಲ್ಲ ಎಂದ ಮೇಲೆ ಬಡವರ ಬಳಿ ಎಲ್ಲಿ ಇರಲು ಸಾಧ್ಯ? ಯಾವುದನ್ನು ಓದಬೇಕು ಯಾವುದನ್ನು ಬಿಡಬೇಕು ಎಂಬುದು ಮಕ್ಕಳಿಗೆ ತಿಳಿಯದ ಸಂಗತಿ. ಅವರು ಈಗ ಗೊಂದಲದಲ್ಲಿ ಸಿಲುಕಿದ್ದಾರೆ. ಶಿಕ್ಷಣ ಸಚಿವರೂ ಹೊಸಬರು. ಹೀಗಾಗಿ ಇಡೀ ಶಿಕ್ಷಣ ರಂಗ ಗೊಂದಲದಲ್ಲಿ ಮುಳುಗಿದೆ.
ರಾಜಕೀಯ ಪಕ್ಷಗಳು ತಮ್ಮದೇ ಆದ ರಾಜಕೀಯ ಸಿದ್ಧಾಂತ ಹೊಂದಿರುವುದು ತಪ್ಪೇನಲ್ಲ. ಅದನ್ನು ಪ್ರಾಥಮಿಕ ಶಿಕ್ಷಣದಲ್ಲಿರುವ ಮಕ್ಕಳ ತಲೆಗೆ ತುಂಬುವ ಕೆಲಸ ಕೈಗೊಳ್ಳಬಾರದು. ರಾಜಕೀಯ ಸಿದ್ಧಾಂತ ತಿಳಿದುಕೊಳ್ಳುವುದಕ್ಕೆ ಮಕ್ಕಳಿಗೆ ಪ್ರಬುದ್ಧಾವಸ್ಥೆ ಬೇಕು. ಅದಕ್ಕೆ ಮುನ್ನ ಹೇರುವುದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ. ಇದು ತಿಳಿಯದ ಸಂಗತಿ ಏನಿಲ್ಲ. ಹಿರಿಯರ ಸೈದ್ಧಾಂತಿಕ ಹೋರಾಟದಲ್ಲಿ ಮಕ್ಕಳು ಬಲಿಪಶುವಾಗುತ್ತಿದ್ದಾರೆ. ಹಿಂದಿನಿಂದಲೂ ನಾವು ಶಿಕ್ಷಣವನ್ನು ಆಡಳಿತದಿಂದ ದೂರ ಇಟ್ಟಿದ್ದೇವೆ. ರಾಜಮಹಾರಾಜರು ಕೂಡ ಗುರುಕುಲದಲ್ಲಿ ಬೆಳೆದವರು. ಅಲ್ಲಿ ರಾಜಕೀಯ ಸಿದ್ಧಾಂತದ ಸಂಘರ್ಷ ಇರುತ್ತಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೂಡ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಶಿಕ್ಷಣ ತಜ್ಞರ ತೀರ್ಮಾನವೇ ಅಂತಿಮ. ವಿವಿ ಶಿಕ್ಷಣ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಾವು ಅಧಿಕಾರ ನೀಡಿಲ್ಲ. ರಾಜ್ಯಪಾಲರು ಮತ್ತು ಯುಜಿಸಿ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಪ್ರಾಥಮಿಕ ಶಿಕ್ಷಣ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದ ವಿಷಯ. ಆದರೆ ಸರ್ಕಾರಗಳು ತಮ್ಮ ರಾಜಕೀಯ ಸಿದ್ಧಾಂತಗಳನ್ನು ಎಳೆ ಮನಸ್ಸಿನ ಮೇಲೆ ಹೇರಬಾರದು. ಮಕ್ಕಳ ಮನಸ್ಸು ಮೃದುವಾಗಿರುತ್ತದೆ. ಎಲ್ಲವನ್ನೂ ಹೀರಿಕೊಳ್ಳುವ ಗುಣ ಹೊಂದಿರುತ್ತದೆ. ಆ ಸಮಯದಲ್ಲಿ ಶಿಕ್ಷಣ ವ್ಯವಸ್ಥೆ ಉದಾರ ಮನಸ್ಸು ಬೆಳೆಸುವುದಕ್ಕೆ ಸಹಕಾರಿಯಾಗಿರಬೇಕು. ಪೂರ್ವಾಗ್ರಹ ಭಾವನೆ ತುಂಬುವ ಕೆಲಸ ನಡೆಯಬಾರದು.
ಈಗ ಶಿಕ್ಷಣ ರಂಗವನ್ನು ಸಂಕುಚಿತ ಮನೋಭಾವದಿಂದ ನೋಡುವ ಹಾಗೆ ಪರಿಸರ ರೂಪಿಸುವ ಕೆಲಸ ನಡೆಯುತ್ತಿದೆ. ಇದು ಅಪಾಯಕಾರಿ. ಮಕ್ಕಳು ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬೇಕು. ಯಾವುದೇ ಜ್ಞಾನ ಎಲ್ಲಿಂದಲಾದರೂ ಬರಲಿ ಅದನ್ನು ಸ್ವೀಕರಿಸುವ ಮುಕ್ತ ಮನಸ್ಸು ಮಕ್ಕಳಿಗೆ ಇರಬೇಕು. ಜ್ಞಾನ ಸಂಪಾದನೆಯಾದ ಮೇಲೆ ಅದನ್ನು ಬಳಸುವಾಗ ವಿವೇಕ ಹಾಗೂ ಮನಸ್ಸಾಕ್ಷಿಗಳ ಮೂಲಕ ಮಕ್ಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಮುಂದಿನ ಜನಾಂಗ ಹೇಗಿರಬೇಕು ಎಂದು ಹೇಳುವುದು ಈಗಿನ ಜನಾಂಗದ ಕೆಲಸವಲ್ಲ. ಮಕ್ಕಳು ಮುಕ್ತ ಮನಸ್ಸು ಬೆಳೆಸಿಕೊಂಡಾಗ ಸಮಕಾಲೀನ ಬದಲಾವಣೆಗೆ ಮಾನಸಿಕವಾಗಿ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಪೂರ್ವಗ್ರಹ ಭಾವನೆ ಮಕ್ಕಳ ಮಾನಸಿಕ ಬೆಳವಣಿಗೆಗೆ ಮಾರಕವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಮಕ್ಕಳು ಏನು ಕಲಿಯಬೇಕೆಂಬುದನ್ನು ಶಿಕ್ಷಕರಿಗೆ ಬಿಡೋಣ. ಅವರಿಗೆ ಬೇಕಾದ ಸವಲತ್ತು ಕಲ್ಪಿಸಿಕೊಡುವುದಷ್ಟೇ ಸರ್ಕಾರದ ಕೆಲಸ.
