Home ತಾಜಾ ಸುದ್ದಿ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ಹಡಗು ಮುಳುಗಡೆ: ಸಿಬ್ಬಂದಿಗಳ ರಕ್ಷಣೆ

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ಹಡಗು ಮುಳುಗಡೆ: ಸಿಬ್ಬಂದಿಗಳ ರಕ್ಷಣೆ

0

ಮಂಗಳೂರು: ಕರಾವಳಿ ಸಮುದ್ರ ತೀರದಿಂದ 60 ನಾಟಿಕಲ್‌ ಮೈಲ್‌ ದೂರದಲ್ಲಿ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಎಂಎಸ್‌ವಿ ಸಲಾಮತ್‌ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಸಮುದ್ರ ಮಧ್ಯದಲ್ಲಿ ಮುಳುಗಡೆಯಾಗಿದೆ.
ಸರಕು ಸಾಗಣೆ ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು. ಮೇ 18 ರಂದು ಲಕ್ಷದ್ವೀಪದ ಕಡಮತ್‌ ದ್ವೀಪಕ್ಕೆ ತಲುಪಬೇಕಾಗಿತ್ತು.
ಹಡಗಿನಲ್ಲಿ 16 ಭಾರತೀಯ ಸಿಬ್ಬಂದಿಗಳಿದ್ದು, ಸಿಮೆಂಟ್‌ ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದರು. ಅರಬ್ಬಿ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದ ಪರಿಣಾಮ ಸಂಚಾರಕ್ಕೆ ತುಸು ಅಡಚಣೆ ಉಂಟಾಗಿತ್ತು. ಈ ನಡುವೆ ಸಮುದ್ರದ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಹಡಗಿಗೆ ನೀರು
ನುಗ್ಗಿದ್ದು, ಹಡಗು ಮುಳುಗಿದೆಯಾಗಿದೆ. ಈ ವೇಳೆ ಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ
ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಕೋಸ್ಟ್‌ ಗಾರ್ಡ್‌ ಮಾಹಿತಿ ನೀಡಿದೆ.
ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ನಡೆಸಿದ್ದು, ಗಸ್ತು ತಿರುಗುತ್ತಿದ್ದ ಕೋಸ್ಟ್‌ ಗಾರ್ಡ್‌ನ ವಿಕ್ರಂ ನೌಕೆಯಲ್ಲಿ ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಸಲಾಗಿತ್ತು.
ಹಡಗಿನಲ್ಲಿದ್ದ ಸಿಬ್ಬಂದಿಗಳಾದ ಇಸ್ಮಾಯಿಲ್‌ ಶರೀಫ್‌, ಅಲೆಮನ್‌ ಅಹ್ಮದ್‌ ಬಾಯ್‌ ಗಾವ್‌, ಕಾಕಲ್‌ ಸುಲೇಮಾನ್‌ ಇಸ್ಮಾಯಿಲ್‌, ಅಕ್ಟರ್‌ ಅಬ್ದುಲ್‌ ಸುರಾನಿ, ಕಸಂ ಇಸ್ಮಾಯಿಲ್‌ ಮತ್ತು ಅಜ್ಜಲ್‌ ಅವರನ್ನು ವಿಕ್ರಂ ನೌಕೆಯಲ್ಲಿ ರಕ್ಷಿಸಿ ದಡಕ್ಕೆ ಕರೆತರಲಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

Exit mobile version