Home ನಮ್ಮ ಜಿಲ್ಲೆ ಭರವಸೆಯಂತೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ 22 ರಂದು ಸುವರ್ಣಸೌಧದೆದುರು ಬೃಹತ್‌ ಪ್ರತಿಭಟನೆ

ಭರವಸೆಯಂತೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ 22 ರಂದು ಸುವರ್ಣಸೌಧದೆದುರು ಬೃಹತ್‌ ಪ್ರತಿಭಟನೆ

0

ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಈ ಹಿಂದೆ ಭರವಸೆ ನೀಡಿದಂತೆ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಡಿ. 22 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು 2ಎ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಆರ್. ಬಳ್ಳಾರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಮೀಸಲಾತಿ ನೀಡುವ ಕುರಿತು ಈಗಾಗಲೇ 3-4 ಬಾರಿ ವಾಗ್ದಾನ ಮಾಡಿದ್ದು, ಇವರೆಗೆ ಮೀಸಲಾತಿ ನೀಡಿಲ್ಲ. ಇದರಿಂದಾಗಿ ಸಮಾಜದ ಬಡ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ರಾಜ್ಯದಲ್ಲಿ ಸುಮಾರು 1.30 ಕೋಟಿ ಪಂಚಮಸಾಲಿ ಸಮಾಜದವರಿದ್ದು, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದೆ ಉಳಿದಿದ್ದಾರೆ. ಸರ್ಕಾರ 2ಎ ಮೀಸಲಾತಿ ನೀಡಿದರೆ ಸಮಾಜದ ಬಡ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ ಮಾತನಾಡಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದ್ದು, ಸಮಾಜದ ಜನರ ಸಹನೆಯ ಕಟ್ಟೆ ಒಡೆದಿದೆ. ಈ ಹೋರಾಟ ಅಂತಿಮ ಹೋರಾಟವಾಗಲಿದ್ದು, ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭುವನೇಶ್ವರ ಬಳ್ಳಾರಿ, ಸೋಮಶೇಖರ ಕೋತಂಬ್ರಿ, ಎ.ಬಿ.ಪಾಟೀಲ, ರಾಜಶೇಖರ ಹಲಸೂರ, ಶಿವಾನಂದ ಬಾಗೂರ ಇತರರು ಇದ್ದರು.

Exit mobile version