ದಾವಣಗೆರೆ: ಕಂದಾಯ ನಿವೇಶನ-ಕಟ್ಟಡಗಳ ಸಕ್ರಮ ನಿರೀಕ್ಷಿತ ಮಟ್ಟ ತಲುಪಲು ಬಿ-ಖಾತಾದ ಲೋಪ-ದೋಷಗಳನ್ನು ತಿದ್ದುಪಡಿಗೊಳಿಸಿ ಮುಂಬರುವ 15 ದಿನಗಳೊಳಗಾಗಿ ನೂತನ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಪೌರಾಡಳಿತ, ಹಜ್ ಸಚಿವ ರಹೀಂ ಖಾನ್ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿ-ಖಾತಾದಲ್ಲಿ ‘ಅನಧಿಕೃತ’ ಎಂದು ನಮೂದಾಗಿವುದರಿಂದ ನಿರೀಕ್ಷಿತ ಮಟ್ಟದಲ್ಲಿ ಜನರು ಸಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಈಗಾಗಲೇ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕಾನೂನು ಅಭಿಪ್ರಾಯವನ್ನೂ ಪಡೆದು ಹೊಸದಾಗಿ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮಹಾನಗರ ಪಾಲಿಕೆ ಮತ್ತು ನಗರಸಭೆಗಳ ಮಟ್ಟದಲ್ಲಿ ಮಾತ್ರ ಬಿ-ಖಾತಾ ಮಾಡಿಕೊಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಂಚಾಯತಿ ಮಟ್ಟದಲ್ಲಿಯೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪೌರಕಾರ್ಮಿಕರನ್ನು ಖಾಯಂಗೊಳಿಸಿದAತೆ ಲೋಡರ್ಸ್ ಮತ್ತು ಹೆಲ್ಪರ್ಸ್ರನ್ನು ಖಾಯಂಗೊಳಿಸಬೇಕೆನ್ನುವ ಒತ್ತಾಯ ನಮ್ಮ ಮುಂದಿದೆ. ರಾಜ್ಯದಲ್ಲಿ 15ಸಾವಿರಕ್ಕಿಂತ ಹೆಚ್ಚು ಲೋಡರ್ಸ್ ಮತ್ತು ಹೆಲ್ಪರ್ಸ್ಗಳಿದ್ದು, ಅವರಿಗೆ ಸದ್ಯಕ್ಕೆ ನೇರಪಾವತಿ ನೀಡಬೇಕೆಂದು ಚಿಂತನೆ ನಡೆದಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಿಯೂ ನೀರಿನ ಕೊರತೆ ಉಂಟಾಗಬಾರದು ಎನ್ನುವುದು ಮುಖ್ಯಮಂತ್ರಿಗಳ ಆದೇಶವಾಗಿದ್ದು ಅದಕ್ಕಾಗಿ ಸಾಕಷ್ಟು ಅನುದಾನವನ್ನೂ ಸರ್ಕಾರದಿಂದ ನೀಡಲಾಗಿದೆ. ಎಲ್ಲಿಯೇ ನೀಡಿನ ಕೊರತೆಯಿದ್ದರೂ ಅಧಿಕಾರಿಗಳು ನಮ್ಮ ಗಮನಕ್ಕೆ ತರಬೇಕೆಂದು ತಿಳಿಸಲಾಗಿದೆ ಎಂದರು.
ನಗರುತ್ಥಾನ, ಅಮೃತ್-2 ಯೋಜನೆ ಅಡಿಯಲ್ಲಿನ ಬಾಕಿ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೆಟ್ಟಿಕೊಂಡು ಪೂರ್ಣಗೊಳಿಸಲು ಈಗಾಗಲೇ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನ್ಯಾಮತಿ ಪ್ರತ್ಯೇಕ ತಾಲ್ಲೂಕಾಗಿ ಸುಮಾರು 5 ವರ್ಷಗಳು ಸಂದರೂ ಇದುವರೆಗೂ ಪುರಸಭೆ ಆಗಿ ವಿಧಾನಸಭಾ ಕ್ಷೇತ್ರವಾಗಿ ಪರಿವರ್ತಿಸಿ ಚುನಾವಣೆ ನಡೆಸಿಲ್ಲ ಎಂಬ ಪ್ರಶ್ನೆಗೆ ಜನಸಂಖ್ಯೆ ಸೇರಿದಂತೆ ವಿವಿಧ ಮಾನದಂಡಗಳ ಮೇಲೆ ಕ್ಷೇತ್ರ ಪ್ರತ್ಯೇಕಿಸಲಾಗುತ್ತದೆ ಎಂದು ಹೇಳಿದರು