Home ಸುದ್ದಿ ರಾಜ್ಯ ಗಣಿ ಗೋಲ್‌ಮಾಲ್: 6 ಬಂದರು ತನಿಖೆಗೆ ಸಿಬಿಐ ಹಿಂದೇಟೇಕೆ?

ಗಣಿ ಗೋಲ್‌ಮಾಲ್: 6 ಬಂದರು ತನಿಖೆಗೆ ಸಿಬಿಐ ಹಿಂದೇಟೇಕೆ?

0

ಶಿವಕುಮಾರ್ ಮೆಣಸಿನಕಾಯಿ

ದೇಶದ ಇತಿಹಾಸದಲ್ಲೇ ಅತಿದೊಡ್ಡ ನೈಸರ್ಗಿಕ ಸಂಪತ್ತಿನ ಲೂಟಿ ಹಗರಣ ಎಂಬ ಕುಖ್ಯಾತಿಗೆ ಒಳಗಾದ ಕರ್ನಾಟಕದ ಕಬ್ಬಿಣದ ಅದಿರಿನ ಹಗರಣದ ತನಿಖೆಯನ್ನು 2011ರಲ್ಲಿ ರಾಜ್ಯ ಸರಕಾರ ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ವಹಿಸಿದಾಗ ಜನರು ನ್ಯಾಯ ಸಿಗುತ್ತದೆ ಎಂದೇ ಭಾವಿಸಿದ್ದರು.

ಆದರೆ ಸಿಬಿಐಗೆ ವಹಿಸಿದ ದೇಶದ 9 ಬಂದರುಗಳ ಪೈಕಿ ಕೇವಲ 3 ಬ೦ದರುಗಳ ತನಿಖೆ ನಡೆಸಿ ಉಳಿದ 6 ಬಂದರುಗಳಿಂದ ಅಕ್ರಮವಾಗಿ ರಫ್ತಾದ ಆದಿರಿನ ಪ್ರಕರಣಗಳ ತನಿಖೆ ನಡೆಸದೇ ಹಲವು ವರ್ಷಗಳ ಬಳಿಕ ವಾಪಸ್‌ ಕಳಿಸಿದೆ. ಇದೀಗ ದೇಶದ 6 ಬಂದರುಗಳ ತನಿಖೆಯೂ ರಾಜ್ಯ ಸರಕಾರದ ಹೆಗಲಿಗೆ ಬಿದ್ದಿದೆ.

ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದ ಲೋಕಾಯುಕ್ತ ಸಂಸ್ಥೆ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪರಿಣಾಮ ದೇಶದ 10 ಬಂದರುಗಳ ಮೂಲಕ 2.98 ಕೋಟಿ ಮೆಟ್ರಿಕ್ ಟನ್‌ ಕಬ್ಬಿಣದ ಅದಿರನ್ನು ಆಕ್ರಮವಾಗಿ ರಫ್ತು ಮಾಡಲಾಗಿದೆ. ಇದರಿಂದ 12 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದನ್ನು ತನಿಖೆಗೊಳಪಡಿಸಬೇಕು ಎಂದು 2011ರ ಜುಲೈನಲ್ಲಿ ಶಿಫಾರಸು ಮಾಡಿತ್ತು. ರಾಜ್ಯ ಸರಕಾರ 2013ರ ನವೆಂಬರ್‌ನಲ್ಲಿ ದೇಶದ 9 ಬಂದರುಗಳಿಂದ 50 ಸಾವಿರ ಮೆಟ್ರಿಕ್‌ ಟನ್‌ಗಿಂತ ಹೆಚ್ಚು ಪ್ರಮಾಣದಲ್ಲಿ ರಫ್ತಾದ ಪ್ರಕರಣಗಳನ್ನು ತನಿಖೆ ನಡೆಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.

ಸುಪ್ರೀಂಕೋರ್ಟ್ ನೇಮಕಗೊಳಿಸಿದ್ದ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಹಾಗೂ ಲೋಕಾಯುಕ್ತ ವರದಿ ಆಧರಿಸಿ ಅಕ್ರಮ ಗಣಿಗಾರಿಕೆ ವಿರುದ್ಧ ಬಹುದೊಡ್ಡ ಕಹಳೆ ಮೊಳಗಿದ ಬೆನ್ನಲ್ಲೇ ರಾಜ್ಯ ಸರಕಾರ ಸಿಬಿಐಗೆ ಅಕ್ರಮ ಗಣಿಗಾರಿಕೆ ಪ್ರಕರಣ ವಹಿಸಿದ್ದೇ ತಡ, ಕರ್ನಾಟಕದ ಸ್ವಯಂಘೋಷಿತ ರಿಪಬ್ಲಿಕ್‌ಗಳಲ್ಲಿ ನಡುಕ ಹುಟ್ಟಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ಭಾರಿ ಹೋರಾಟ ನಡೆಸಿದ್ದ ಹೋರಾಟಗಾರರೆಲ್ಲ ರಾಜ್ಯದ ನೈಸರ್ಗಿಕ ಗಣಿ ಸಂಪತ್ತು ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗೆ ಬಹುದೊಡ್ಡ ಅಸ್ತ್ರ ಸಿಕ್ಕಿದೆ ಎಂದೇ ಭಾವಿಸಿತ್ತು. ಆದರೆ 2013ರಲ್ಲಿ ದೇಶದ 9 ಬಂದರುಗಳಿಂದ ರಫ್ತಾದ ಕಬ್ಬಿಣದ ಅದಿರಿನ ವ್ಯವಹಾರದ ತನಿಖೆ ಆರಂಭಿಸಿದ ಸಿಬಿಐ ಈ ನಿರೀಕ್ಷಿತ ಸಾಧನೆಯನ್ನೇನೂ ಮಾಡಿಲ್ಲ.

ಸುಮಾರು 12 ವರ್ಷಗಳ ನಂತರವೂ ಈವರೆಗೆ ಕೇವಲ 3 ಬ೦ದರುಗಳಿಂದ ಸಾಗಾಣಿಕೆಯಾದ ಅಕ್ರಮ ಅದಿರಿನ ಪ್ರಕರಣಗಳಲ್ಲಿ 37 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಆದರೆ ಇದರಲ್ಲಿ ಈತನಕ ತೀರಾ ಕ್ಲುಲ್ಲಕ ಎನ್ನುವಷ್ಟು ಮಾತ್ರ. ಉಳಿದ 6 ಬಂದರುಗಳ ಪ್ರಕರಣಗಳನ್ನು ಸಿಬಿಐ ಪ್ರಾಥಮಿಕ ತನಿಖೆಯ ಬಳಿಕ ತನಿಖೆಯಿಂದ ಹಿಂದಕ್ಕೆ ಸರಿದಿದೆ. ಅದಕ್ಕೆ ಸಾಕಷ್ಟು ತಾಂತ್ರಿಕ ಕಾರಣಗಳನ್ನೂ ನೀಡಿದೆ. ಇದೀಗ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತನ್ನ ನಾಲ್ಕನೇ ಶಿಫಾರಸಿನಲ್ಲಿ ದೇಶದ 6 ಬಂದರುಗಳ ಮೂಲಕ ರಫ್ತಾದ ಅಕ್ರಮ ಅದಿರಿನ ಕುರಿತಂತೆ ರಾಜ್ಯ ಸರಕಾರದ ಎಸ್‌ಐಟಿಯಿಂದಲೇ ತನಿಖೆ ನಡೆಸುವಂತೆ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಸಿಬಿಐ ಕೈಬಿಟ್ಟ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ಇನ್ನೇನು ಮುಗಿದೇ ಹೋಗಿತ್ತು ಎಂಬಂತಹ ಪ್ರಕರಣಗಳಿಗೆ ಮತ್ತೆ ಆಶಾಕಿರಣ ಮೂಡಿದೆ.

ಕೃಷ್ಣಪಟ್ಣಂ ಬಂದರು ರಹಸ್ಯ!: ಚೀನಾದ ಬೀಜಿಂಗ್‌ನಲ್ಲಿ 2008ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಕ್ಕೆ ಬಳ್ಳಾರಿಯಿಂದಲೇ ಅತಿಹೆಚ್ಚು ಕಬ್ಬಿಣದ ಅದಿರನ್ನು ರಫ್ತು ಮಾಡಲಾಗಿತ್ತು. ಅಧಿಕೃತವಾಗಿ ರಾಜ್ಯ ಸರಕಾರದ ಪರವಾನಿಗೆ ಮತ್ತು ಕೇಂದ್ರ ಸರಕಾರಕ್ಕೆ ಸುಂಕ ಭರಿಸಿ ರಫ್ತಾದ ಆದಿರಿನ ಪ್ರಮಾಣ ಶೇ.2ರಷ್ಟು ಮಾತ್ರ. ಉಳಿದ ಶೇ.98ರಷ್ಟು ಅದಿರು ಅಕ್ರಮವಾಗಿಯೇ ರಫ್ತಾಗಿತ್ತು.

ವಿಶೇಷ ಎಂದರೆ, ದೇಶದಿಂದ ರಫ್ತಾದ 2.98 ಕೋಟಿ ಮೆಟ್ರಿಕ್ ಟನ್ ಅದಿರಿನಲ್ಲಿ ಶೇ.32ರಷ್ಟು ಅದಿರು ಅಂದರೆ 1 ಕೋಟಿ 11 ಲಕ್ಷ ಮೆಟ್ರಿಕ್ ಟನ್ ರಫ್ತಾಗಿರುವುದು ಆಂಧ್ರಪ್ರದೇಶದ ಬಂದರಿನ ಮೂಲಕವೇ, ಆದರೆ ಸಿಬಿಐ ತಾನು ಕೃಷ್ಣಪಟ್ಣಂ ಬಂದರಿನ ತನಿಖೆ ಆರಂಭಿಸಿದ 9 ವರ್ಷಗಳ ನಂತರ ತನಿಖೆ ನಡೆಸಲು ಆಗುವುದಿಲ್ಲ ಎಂದು ಕರ್ನಾಟಕ ಸರಕಾರಕ್ಕೆ ವಾಪಸ್‌ ಕಳಿಸಿದೆ.

ಈಗಾಗಲೇ ತಡವಾಗಿರುವುದರಿಂದ ಕರ್ನಾಟಕದ ಎಸ್‌ಐಟಿ ತನಿಖೆ ನಡೆಸಿದರೆ ಸಾಕ್ಷಿಗಳು ಸಿಗುವುದಾದರೂ ಹೇಗೆ ಎಂಬ ಕನಿಷ್ಠ ಪಜ್ಞೆ ಇಲ್ಲದೇ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿರುವುದು ಸಂಶಯಗಳಿಗೆ ಕಾರಣವಾಗಿದೆ. ಸುದೀರ್ಘ ಅವಧಿಯ ನಂತರ ಸಿಬಿಐ ನಡೆ ಹಿಂದೆ ರಾಜಕೀಯ ವಾಸನೆ ಅಲ್ಲಿರುತ್ತಿರುವುದು ಬರುತ್ತಿದೆ. ಇದೇ ಅಂಶಗಳನ್ನು ಉಲ್ಲೇಖಿಸಿ ಸಚಿವ ಹೆಚ್. ಕೆ.ಪಾಟೀಲ್ ನೇತೃತ್ವದ ರಾಜ್ಯ ಸಚಿವ ಸಂಪುಟ ಉಪ ಸಮಿತಿ ಕೇಂದ್ರ ಸರಕಾರದಿಂದ ಅನುಮತಿ ಪಡೆದು ತನಿಖೆ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತ್ತು. ಸಿಎಂ ಸಿದ್ದರಾಮಯ್ಯ ಈ ಪ್ರಕರಣಕ್ಕೆ ಮರುಜೀವ ನೀಡಲು ತೀರ್ಮಾನಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version