ಬೆಂಗಳೂರು: ಡಿಫೆನ್ಸ್ ಕಾರಿಡಾರ್ ನಮ್ಮ ರಾಜ್ಯದ ಹಕ್ಕಾಗಿದ್ದು, ಕರ್ನಾಟಕಕ್ಕೆ ಕೊಡುವಂತೆ ಒತ್ತಾಯ ಮಾಡುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಡಿಫೆನ್ಸ್ ಕಾರಿಡಾರ್ ಆಂಧ್ರ ಪ್ರದೇಶಕ್ಕೆ ಸ್ಥಳಾಂತರದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಮ್ಮ ರಾಜ್ಯದ #HAL ಘಟಕವನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರಕ್ಕೆ ಕೋರಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೊಂದು ವೇಳೆ ಅವರು ಮನವಿ ಮಾಡಿದ್ದರೆ ಅದು ತಪ್ಪು. ರಾಜ್ಯಗಳ ನಡುವಿನ ಸಹಕಾರಕ್ಕೆ ಸೂಕ್ತವಲ್ಲ. ಈ ಬಗ್ಗೆ ನಾವು ಗಂಭೀರವಾಗಿ ಚರ್ಚಿಸುತ್ತೇವೆ.
ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ನಲ್ಲಿ ರಾಷ್ಟ್ರಕ್ಕೆ ನಮ್ಮ ರಾಜ್ಯದ ಕೊಡುಗೆ ಶೇ. 65ರಷ್ಟಿದೆ. ವಿಶ್ವದಲ್ಲೇ ನಮ್ಮ ರಾಜ್ಯ 3ನೇ ಸ್ಥಾನದಲ್ಲಿದೆ. ಇಷ್ಟೊಂದು ಮಹತ್ವದ ಕೊಡುಗೆ ನೀಡಿದರೂ ಡಿಫೆನ್ಸ್ ಕಾರಿಡಾರನ್ನು ಯುಪಿ ಮತ್ತು ತಮಿಳುನಾಡಿಗೆ ಕೇಂದ್ರ ಸರ್ಕಾರ ನೀಡಿದೆ. ಯೋಗ್ಯತೆಯ ಆಧಾರದ ಮೇಲೆ ನಮ್ಮ ರಾಜ್ಯಕ್ಕೇ ನೀಡಬೇಕಿತ್ತು. ಶೀಘ್ರದಲ್ಲೇ ಕೇಂದ್ರ ಸಚಿವ ಹಾಗೂ ಮಾನ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಮಾಡಿ, ಡಿಫೆನ್ಸ್ ಕಾರಿಡಾರ್ ನಮ್ಮ ರಾಜ್ಯದ ಹಕ್ಕಾಗಿದ್ದು, ಕರ್ನಾಟಕಕ್ಕೆ ಕೊಡುವಂತೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.