ವಿಜಯಪುರದ ಇಟ್ಟಂಗಿ ಭಟ್ಟಿ ಕಾರ್ಮಿಕರಿಗೆ ನೀಡಿದ ಹಿಂಸೆ, ಮಾಡಿದ ಹಲ್ಲೆ ಅತ್ಯಂತ ಅಮಾನುಷ. ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಎಲ್ಲರೂ ಛೀ, ಥೂ ಎಂದು ನೊಂದು ವ್ಯಾಕುಲತೆ ವ್ಯಕ್ತಪಡಿಸಿದ ಘಟನೆ.
ಕಾರ್ಮಿಕರು ಸಂಕ್ರಾಂತಿಗೆ ಹೋದವರು ತಡವಾಗಿ ಬಂದರು. ಅಲ್ಲದೇ ಮತ್ತೆ ಕೆಲಸ ಮಾಡಲು ಇಚ್ಛಿಸಲಿಲ್ಲ ಎಂಬ ಕಾರಣಕ್ಕೆ ಭಟ್ಟಿ ಮಾಲೀಕ ಖೇಮು ರಾಠೋಡ್, ಆ ಕಾರ್ಮಿಕರನ್ನು ಕೂಡಿ ಹಾಕಿ ಹಿಂಸಿಸಿದ್ದಲ್ಲದೇ ಹೊರ ವಲಯದ ವೃತ್ತದಲ್ಲಿ ಫೈಬರ್ ಪೈಪ್‌ನಿಂದ ಹಲ್ಲೆ ನಡೆಸಿದ. ಕಾರ್ಮಿಕರ ಕಿರುಚಾಟ, ಮಾಲೀಕನ ಅಟ್ಟಹಾಸ, ಕ್ರೌರ್ಯ ವಿಡಿಯೋ ಮೂಲಕ ಬಯಲಾದಾಗ ಎಲ್ಲರಿಗೂ ಈ ಹಿಂದಿನ ಗುಲಾಮಿ' ಸ್ಥಿತಿ ಅರ್ಥವಾಯಿತು. ಘಟನೆಗೆ ಸಮಾಜದ ಪ್ರತಿಯೊಬ್ಬರೂ ವ್ಯಾಕುಲತೆ ವ್ಯಕ್ತಪಡಿಸಿದರು. ಈ ದುಷ್ಕೃತ್ಯವನ್ನು ಸಮರ್ಥಿಸಿದವರು ಯಾರೂ ಇಲ್ಲ. ಸ್ವತಃ ಮುಖ್ಯಮಂತ್ರಿ, ಕಾರ್ಮಿಕ ಮಂತ್ರಿ, ಜಿಲ್ಲಾ ಮಂತ್ರಿ, ಕೇಂದ್ರ ಸಚಿವರಾದಿಯಾಗಿ ಎಲ್ಲರೂ ಕಠಿಣವಾಗಿ ಖಂಡಿಸಿದವರೇ. ಕಾಯ್ದೆ ಕಾನೂನು ಕಠೋರವಾಗಿದ್ದರೂ ಇಂತಹ ಕೃತ್ಯ ನಡೆಯುತ್ತಿದೆಯಲ್ಲ, ಇದಕ್ಕಾಗಿ ದೂಷಿಸುವುದು ಯಾರನ್ನು? ಎಷ್ಟು ಆಘಾತಕಾರಿ ವಿಷಯವಿದು!? ಇಟ್ಟಂಗಿ ಭಟ್ಟಿಯ ಮಾಲೀಕ ಹಾಗೂ ಹಲ್ಲೆಗೊಳಗಾದ ಕಾರ್ಮಿಕರು ಒಂದೇ ಸಮ ಸಮುದಾಯಕ್ಕೆ ಸೇರಿದ್ದರಿಂದ (ಇಟ್ಟಂಗಿ ಮಾಲೀಕ ಪರಿಶಿಷ್ಟ ಪಂಗಡದ ಲಮಾಣಿ, ಕಾರ್ಮಿಕರು ಪರಿಶಿಷ್ಟ ಜಾತಿಯ ಮಾದರು) ವರ್ಗ ಸಂಘರ್ಷ ಭುಗಿಲೇಳಲಿಲ್ಲ. ಅಲ್ಲದೇ ಎಲ್ಲರೂ ಒಂದೇ ಜಿಲ್ಲೆಯವರು. ಹೀಗಾಗಿ ಹೊರ ಶಕ್ತಿಯ ಪ್ರಾದೇಶಿಕ ಅಸಮಾಧಾನ, ಸಂಘರ್ಷಕ್ಕೆ ದಾರಿಯಾಗಲಿಲ್ಲ. ಈ ಘಟನೆ ಸುಭೀಕ್ಷ ರಾಜ್ಯ, ಕಲ್ಯಾಣ ಸಮಾಜದ ಗುರಿ ಧ್ಯೇಯ ಹೊಂದಿರುವ ರಾಜ್ಯದ ಯೋಜನೆಗಳ
ಮುಖವಾಡ’ವನ್ನು ಈಗ ಬಯಲು ಮಾಡಿದೆ. ರಾಷ್ಟ್ರ, ರಾಜ್ಯದ ಅಭ್ಯುದಯ ಯೋಜನೆಗಳ ಅನುಷ್ಠಾನದ ಪೊಳ್ಳುತನವನ್ನು ಬಿಚ್ಚಿಟ್ಟಿದೆ.
ರಾಜ್ಯದ ಮುಖ್ಯಮಂತ್ರಿ, ಕಾರ್ಮಿಕ ಮಂತ್ರಿ ಈ ಘಟನೆಯನ್ನೇನೋ ಖಂಡಿಸಿದರು. ಕಾಯ್ದೆ-ಕಟ್ಟಳೆಗಳು ಇದ್ದರೇನು? ಲಾಭದಾಸೆ ಹೊತ್ತವರಿಗೆ ಮಾನವೀಯತೆ ಬೇಕಲ್ಲ, ಅದೇ ಇಲ್ಲದಾದಾಗ ಇಂತಹ ಘಟನೆಗಳು ಜರುಗುತ್ತವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರೇನೋ ಹೇಳಿದರು.
ಆದರೆ ವಾಸ್ತವ ಮತ್ತು ಮೂಲ ಲೋಪದ ಬೇರು ಇರುವುದೇ ಅವರ ಇಲಾಖೆಯ ದೋಷದಲ್ಲಿ. ಕೇವಲ ಮೂರು ತಿಂಗಳ ಹಿಂದಷ್ಟೇ ತುಮಕೂರಿನಲ್ಲಿ ಇದೇ ರೀತಿ ಇಟ್ಟಂಗಿ ಭಟ್ಟಿಯ ಗೋಪುರ, ಹಗೇವು ಕುಸಿದು ಬಿದ್ದಿತ್ತು. ಕಾರ್ಮಿಕರು ಅದರೊಳಗೆ ಸಿಕ್ಕು ನಲುಗಿ ಹೋಗಿದ್ದರು. ಎರಡು ಪ್ರಾಣಗಳೂ ಹೋಗಿದ್ದವು.
ಮಂಡಕ್ಕಿ ಭಟ್ಟಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ದಿನಗೂಲಿಗಳು ಏನೇನೋ ಆಘಾತಗಳಲ್ಲಿ ಸಾವನ್ನಪ್ಪಿದ್ದಾರೆ, ಇಂದಿಗೂ ಸಾಯುತ್ತಿದ್ದಾರೆ. ಇಲ್ಲವೇ ಅಂಗಾಂಗ ಊನರಾಗುತ್ತಿದ್ದಾರೆ.
ಈಗಿನ ವಿಜಯಪುರದ ಘಟನೆಯನ್ನೇ ನೋಡಿ. ಜಮಖಂಡಿ ತಾಲ್ಲೂಕಿನ ಚಿಕ್ಕನಕಿ ಗ್ರಾಮದ ಉಮೇಶ ಮಾದರ, ಸದಾ ಮಾದರ ಹಾಗೂ ಸದಾಶಿವ ಬಬಲಾದಿ ಮೂವರು ಕಾರ್ಮಿಕರು ಇಟ್ಟಂಗಿ ಭಟ್ಟಿಯಲ್ಲಿ ಕಳೆದ ಎರಡೂವರೆ ಮೂರು ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದವರು. ಅವರಿಗೂ ಒಂದು ಯೋಚನೆಗಳಿವೆ. ಯೋಜನೆಗಳಿವೆ. ಹಬ್ಬಕ್ಕೆ ಹೋದವರು ತಡವಾಗಿ ಬಂದಿದ್ದಾರೆ. ಪಾಪ, ಹಿಂಸಿಸಲ್ಪಟ್ಟರು. ಕುಪಿತ ಮಾಲೀಕನ ಎಂತಹ ರೋಷಾವೇಶ!
ಮೂವರು ಪರಿಶಿಷ್ಟ ಜಾತಿ ಸೇರಿದವರು. ಮನೆ-ಮಠ-ಜಾಗೆ ಯಾವುದೂ ಇಲ್ಲ. ರಟ್ಟೆ ಕಸುವನ್ನೇ ನಂಬಿ ಬದುಕುತ್ತಿರುವ ಕೂಲಿಗಳು. ಇಂದು ಕೂಲಿ ಮಾಡಬೇಕು. ಸಂಜೆ ಉಣ್ಣಬೇಕು. ತನ್ನ ಕುಟುಂಬವನ್ನು ಈ ರೀತಿ ಕಷ್ಟದಿಂದ ಸಾಕಬೇಕು. ಇದು ಅವರ ಸ್ಥಿತಿ.
ಪ್ರಶ್ನೆ ಏನೆಂದರೆ ಈ ಜನರಿಗೆ ಕಾರ್ಮಿಕ ಇಲಾಖೆಯ ಒಂದೇ ಒಂದು ಯೋಜನೆಗಳು ತಲುಪಿಲ್ಲ. ಸರ್ಕಾರದ ಘೋಷಣೆಗಳು ಇವರ ಹೊಟ್ಟೆ ತುಂಬಿಸುತ್ತಿಲ್ಲ. ಏಕೆಂದರೆ ಈ ಮೂವರೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ನೀಡಿಲ್ಲ. ಮನರೇಗಾ ಕೆಲಸ ನೀಡಿಲ್ಲ. ಕಾರ್ಮಿಕ ಕಲ್ಯಾಣ ನಿಧಿ ಇರಲಿ, ಪರಿಶಿಷ್ಟ ಸಮಾಜದ ಸೌಲಭ್ಯಗಳಿರಲಿ, ಯಾವುವೂ ಈ ಜನರಿಗೆ ತಲುಪಿಲ್ಲ.
ಯಾಕೆ ಹೀಗೆ? ಕಾರ್ಮಿಕ ಮಂತ್ರಿಗಳು ಎಲ್ಲರಿಗೂ ಕೂಲಿ ಕಾರ್ಡ್ ಕೊಟ್ಟಿರುವುದಾಗಿ ಘೋಷಿಸಿದ್ದರು. ಆದರೆ ಯಾರಿಗೆ ಲಭಿಸಿದೆ ಈ ಕಾರ್ಡ್? ಇವರಿಗೇಕೆ ಲಭಿಸಿಲ್ಲ? ಇವರಂತೆ ಸಾವಿರಾರು ಮಂದಿ ಈ ಜಿಲ್ಲೆ-ರಾಜ್ಯದಲ್ಲಿ ಇದ್ದಾರೆ. ಕಾರ್ಮಿಕರ ಕಲ್ಯಾಣಕ್ಕಾಗಿ ತಾಲ್ಲೂಕು, ಜಿಲ್ಲೆಯಲ್ಲಿ ಪ್ರತ್ಯೇಕ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ, ಇನ್‌ಸ್ಟçಕ್ಟರ್‌ಗಳು, ನಿರೀಕ್ಷಕರು ಎಲ್ಲರೂ ಇದ್ದಾರೆ. ಹಾಗಿದ್ದೂ ಇಂತಹ ಬಡ, ಧ್ವನಿ ಸತ್ತ ಕಾರ್ಮಿಕರನ್ನೇಕೆ ಇವರಿಗೆ ಕಂಡಿಲ್ಲ?
ಹೇಗಿದೆ ನೋಡಿ. ಈ ರಾಜ್ಯದಲ್ಲಿ, ದೇಶದಲ್ಲಿ ಪರಿಶಿಷ್ಟ ಸಮುದಾಯದ ಕಲ್ಯಾಣ ಅಭಿವೃದ್ಧಿ ಯೋಜನೆಗಳು, ಸ್ವಾತಂತ್ರ್ಯಾನಂತರದಿಂದ ಆರಂಭಗೊಂಡವು. ಈ ಸಮುದಾಯದ ಮಕ್ಕಳಿಗೆ ಶಿಕ್ಷಣ, ವಸತಿ, ಬಟ್ಟೆ ಎಲ್ಲವೂ ಉಚಿತವೆಂದು ಘೋಷಿಸಲಾಯಿತು. ಅಷ್ಟೇ ಅಲ್ಲ. ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೂ ಮೀಸಲಾತಿ ದೊರೆಯಿತು. ದುಡಿಯುವವರಿಗೆ ಮತ್ತು ಕೃಷಿ ಮಾಡಿಸುವವರಿಗೆ ಯೋಜನೆ ರೂಪಿಸಲಾಯಿತು. ಆದರೆ ಈ ಹಿಂಸೆಗೊಳಗಾದ ಉಮೇಶ ಮಾದರ, ಸದಾ ಮಾದರ, ಸದಾಶಿವರಂತಹ ಲಕ್ಷಾಂತರ ಕುಟುಂಬಗಳು ಈವರೆಗೆ ಯಾವ ಸೌಲಭ್ಯ-ವ್ಯವಸ್ಥೆ ಕಂಡಿಲ್ಲ. ಇನ್ನೂ ಅಸ್ಪೃಶ್ಯರೆಂಬ ಹಣೆಪಟ್ಟಿ ಬೇರೆ!
ಕಾರ್ಮಿಕ ಖಾತೆ ಸಚಿವರು ಈ ಕೂಲಿಗಳನ್ನು ಹಿಂಸಿಸಿದ ಘಟನೆಯನ್ನು ಖಂಡಿಸಿ ಎಕ್ಸ್(ಟ್ವೀಟ್) ಮಾಡಿದರು. ಈ ದೇಶದಲ್ಲಿ ಕಾಯ್ದೆ ಕಾನೂನುಗಳಿದ್ದರೂ ಅಪರಾಧ ಚಟುವಟಿಕೆಗಳು ಕಡಿಮೆಯಾಗುತ್ತಿಲ್ಲ. ಏಕೆಂದರೆ ಜನರಿಗೆ ಮಾನವೀಯತೆ ಇಲ್ಲದಾಗಿದೆ.' ಎಂಬುದು ಅವರ ಎಕ್ಸ್‌ನ ಸಾರಾಂಶ. ಇದಕ್ಕೆ ಜನರ ಪ್ರತಿಕ್ರಿಯೆ ಏನಿತ್ತು ಗೊತ್ತಾ?
ನಿಮ್ಮ ಲಂಚಕೋರ, ಭ್ರಷ್ಟ ಸರ್ಕಾರಿ ವ್ಯವಸ್ಥೆ ಇದಕ್ಕೆಲ್ಲ ಕಾರಣ. ಥೂ, ಮಾನ ಮರ್ಯಾದೆ ಇಲ್ಲದ ನೀವುಗಳು… ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು ಎಂದು ಜನರೇ ಉಗುಳಿದರೆ, ನಿಮ್ಮ ಇಲಾಖೆಯ ಸಿಬ್ಬಂದಿ ಇಟ್ಟಂಗಿ ಭಟ್ಟಿ ಇತ್ಯಾದಿಗಳಿಗೆ ಎಷ್ಟು ಬಾರಿ ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ? ಅಲ್ಲಿಯ ಕಾರ್ಮಿಕರ ಸ್ಥಿತಿಗತಿಯ ಕುರಿತು, ಅವರ ಕಲ್ಯಾಣ ಯೋಜನೆಗಳ ಕುರಿತು ಏನು ಕ್ರಮ ಕೈಗೊಂಡಿದ್ದಾರೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.
ಡಾಲರ್ ಎದುರು ದೇಶದ ರೂಪಾಯಿ ಕುಸಿತ, ಕೇಂದ್ರದ ಅನುದಾನ ತಾರತಮ್ಯ, ಜಿಡಿಪಿ, ಶ್ರೀಮಂತ ಉದ್ಯಮಿಗಳ ಸಾಲಮನ್ನಾ ಇತ್ಯಾದಿಗಳ ಕುರಿತು ಮೋದಿ ಸಾಹೇಬರನ್ನು ಸಮರ್ಥವಾಗಿ ಪ್ರಶ್ನಿಸುವ ರಾಜ್ಯ ಕಾರ್ಮಿಕ ಸಚಿವರು ತಮ್ಮ ಇಲಾಖೆಯ ಕಾರ್ಯವೈಫಲ್ಯದ ಕುರಿತೂ ಬಾಯಿಬಿಚ್ಚಬೇಕಲ್ಲವೇ?
ಇದಕ್ಕೂ ಮುಂದೆ ಹೋಗಿ, ಸರ್ಕಾರದ ಏಜೆಂಟರು, ಯೋಜನೆಗಳ ಫಲಾನುಭವಿಗಳಿಂದ ಹಣ ಕಿತ್ತು, ಬೋಗಸ್ ಕೂಲಿ ಕಾರ್ಡ್ ದಂಧೆ ನಡೆಸುತ್ತಿದ್ದಾರಲ್ಲ, ಅವರ ಮೇಲೆ ಏನು ನಿಮ್ಮ ಕ್ರಮ? ನಿಜ ಕೂಲಿಕಾರರಿಗೆ ಎಲ್ಲಿವೆ ಕಾರ್ಡುಗಳು? ಈ ಏಜೆಂಟ್‌ಗಿರಿಯನ್ನು ರದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದವರು ಇನ್ನೂ ಹಲವರು.
ವಾಸ್ತವವಾಗಿ ಇದು ನಿಜ. ಕಳಪೆ ಶಾಸಕಾಂಗದ, ಕಾರ್ಯಾಂಗದ ಕಾರ್ಯವೈಖರಿಯೇ ಯೋಗ್ಯ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ದೊರೆಯದಿರಲು ಕಾರಣ.
ಈಗ ಪ್ರಶ್ನಿಸಿ. ಈ ಮಂದಿಗೇಕೆ ಕೂಲಿ ಕಾರ್ಡ್(ಕಾರ್ಮಿಕ ಕಾರ್ಡ್) ಕೊಟ್ಟಿಲ್ಲ? ಈ ಮಾದರರಿಗೇಕೆ ಮನೆ ಕೊಟ್ಟಿಲ್ಲ? ಕಾರ್ಮಿಕ ಮಂತ್ರಿ ಈಗ ವಿಚಾರಣೆ ನಡೆಸಿದರೆ ವಾಸ್ತವ ಅರಿವಾದೀತು.
ಹೃದಯ, ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಕಣ್ಣಿನ ಶಸ್ತ್ರ ಚಿಕಿತ್ಸೆ, ಪಾರ್ಶ್ವವಾಯು ಇತ್ಯಾದಿ ರೋಗಗಳು ಇಟ್ಟಂಗಿ ಭಟ್ಟಿ ಕೆಲಸ ಮಾಡುವಾಗಿನ ಧೂಳು, ಹೊಗೆ ಉಂಡೇ ಬರುವುದು. ಇಂಥವರ ಚಿಕಿತ್ಸೆಗಾಗಿ ೨ ಲಕ್ಷ ರೂಪಾಯಿವರೆಗಿನ ಸಹಾಯಧನ ದೊರೆಯಬೇಕು. ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ೧೦ ಲಕ್ಷ ರೂಪಾಯಿವರೆಗೆ ಅನುದಾನವಿದೆ. ಕಾರ್ಮಿಕ ಅಭಿವೃದ್ಧಿ ಮಂಡಳಿ ಇದೆ. ಇಂತಹ ಯೋಜನೆಗಳು ಮಾದರರಂತಹ ಲಕ್ಷಾಂತರ ಭಟ್ಟಿ ಕಾರ್ಮಿಕರಿಗೆ ಏಕೆ ತಲುಪಿಲ್ಲ?
ದುರಂತ ನೋಡಿ. ಜನರಿಗೆ ಕೆಲಸ ನೀಡಬೇಕು. ಕೂಲಿ ಲಭ್ಯವಾಗಬೇಕು ಎಂದು ಈ ದೇಶದಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಭರವಸೆ (ಮನರೇಗಾ) ಜಾರಿಗೆ ಬಂದು ಸುಮಾರು ಇಪ್ಪತ್ತೈದು ವರ್ಷಕ್ಕೂ ಹೆಚ್ಚಾಯಿತು. ವರ್ಷದಲ್ಲಿ ೧೫೦ ದಿನ ಕೆಲಸ ದುಡಿಯುವ ಕೈಗಳಿಗೆ ಕಡ್ಡಾಯವಾಗಿ ದೊರೆಯಬೇಕು ಈ ಯೋಜನೆಯ ಅನ್ವಯ! ಕಸುವಿದ್ದ ಜನರಿಗೆ ಮನರೇಗಾ ಕೆಲಸವಿಲ್ಲ. ಯಾರದ್ದೋ ಹೆಸರಿನಲ್ಲಿ ಹಾಜರಾತಿ ಹಾಕಿಸಿ ಹಣ ಹೊಡೆಯುವ ಯೋಜನೆ ಇದಾಗಿಬಿಟ್ಟಿದೆ.
ಮತ್ತೊಂದು ತಮಾಷೆ ಎಂದರೆ ಮನರೇಗಾ ಯೋಜನೆ ಕಳೆದ ಆರು ವರ್ಷಗಳಲ್ಲಿ ಕೂಲಿ ಏರಿಕೆಯಾದದ್ದು ಕರ್ನಾಟಕದಲ್ಲಿ ೩೪ ರೂಪಾಯಿ ಮಾತ್ರ! ಕಳೆದ ಲೋಕಸಭೆ ಚುನಾವಣೆ ಪೂರ್ವ ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ತನ್ನ ಪಾಲಿನ ಕೂಲಿ ಹಣವನ್ನು ಏಳು ರೂಪಾಯಿ ಹೆಚ್ಚಿಸಿದೆ. ಆದರೆ ಅಡುಗೆ ಅನಿಲ (ಗ್ಯಾಸ್), ದಿನಸಿ ಧಾನ್ಯ, ಬಟ್ಟೆ ಎಲ್ಲವುಗಳ ಮೇಲೆ ತೆರಿಗೆ ಶೇಕಡಾ ೧೮ರಷ್ಟು ಏರಿಕೆಯಾಗಿದೆ!! ಹೇಗಿದೆ ನೋಡಿ ಸರ್ಕಾರಿ ಲೆಕ್ಕಾಚಾರ.
ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನೋಂದಣಿ ಇದೆ. ಇಡೀ ಜಿಲ್ಲೆಯಲ್ಲಿ ಕಾರ್ಮಿಕ ಕಾರ್ಡ್ ನೀಡಿರುವ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ.
ಸರ್ಕಾರಿ ಯೋಜನೆಗಳ ಪ್ರಯೋಜನ ಕಟ್ಟಕಡೆಯ ವ್ಯಕ್ತಿಗೂ ಏಕೆ ಲಭ್ಯವಾಗಿಲ್ಲ? ಎಂಬುದರ ಬಗ್ಗೆ ಸರ್ಕಾರ ಒಂದು ಕೇಸ್ ಸ್ಟಡಿ ಮಾಡಬೇಕು. ಇಂತಹ ಲಕ್ಷಾಂತರ ಕುಟುಂಬಗಳು ಈ ರಾಜ್ಯದಲ್ಲಿವೆ. ಒಂದು ಪ್ರಾಮಾಣಿಕ ತನಿಖೆ ನಡೆದಲ್ಲಿ ಕಳೆದ ನಲವತ್ತು ವರ್ಷಗಳ ಸರ್ಕಾರಿ ಹಣ ಪೋಲಾಗಿರುವ, ಭ್ರಷ್ಟರ ಕೈ ಸೇರಿರುವ ಹಗರಣ ಬಯಲಿಗೆ ಬಂದೀತು.
ಇದೇ ಸದಾಶಿವ ಬಬಲಾದಿ ಮಾತನಾಡಿಸಿ. ನಮಗ್ಯರ‍್ರೀ ಕೊಡಬೇಕು. ನಮ್ಹತ್ರ ಯಾರ ಬರ‍್ತಾರ‍್ರೀ? ನಮಗ ಹೆಂಗ ತಿಳೀಬೇಕ್ರೀ ಕೂಲಿ ಕಾರ್ಡ್ ಬಗ್ಗೆ' ಎಂದು ಅಸಹಾಯಕತೆಯಿಂದ, ಮುಗ್ಧತೆಯಿಂದ ಹೇಳುತ್ತಾರೆ. ಈಗ ಈ ಜನರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ. ಗಡಿಪಾರು ಮಾಡಿ ಎಂದೆಲ್ಲ ಮಾದಿಗ ಸಮಾಜ ಆಗ್ರಹಿಸಿದೆ. ಕಾರ್ಮಿಕ ಇಲಾಖೆ, ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳೋ, ನಗರ ಪಕ್ಕದಲ್ಲೇ ಇರುವ ಇಟ್ಟಂಗಿ ಭಟ್ಟಿಗೂ ಕಾಲಿಟ್ಟಿಲ್ಲ ಎಂದರೆ ಅಂತಹ ಕಾರ್ಯಭಾರ ಏನಿದೆ ಗೊತ್ತಿಲ್ಲ. ದೇಶದಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಒಂದು ಕೋಟಿಗೂ ಅಧಿಕ ಕಾರ್ಮಿಕರಿದ್ದಾರೆ. ಇಟ್ಟಿಗೆ ಉತ್ಪಾದನೆಯಲ್ಲಿ ಚೀನಾ ನಂತರ ಭಾರತಕ್ಕೆ ಎರಡನೇ ಸ್ಥಾನ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೃಷಿಯ ನಂತರ ಕೂಲಿಕಾರರು ಕೆಲಸಕ್ಕೆ ವಲಸೆ ಹೋಗುವ ಸ್ಥಳವೆಂದರೆ ಇಟ್ಟಂಗಿ ಭಟ್ಟಿ. ಈ ದೇಶದಲ್ಲಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಇದೆ. ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಆರೋಗ್ಯ ಮತ್ತು ಸುರಕ್ಷತೆಯ ಮಾನದಂಡಗಳಿವೆ. ಇಷ್ಟಿದ್ದೂ ಹೊಗೆ ಉಗುಳುವ, ಅದೇ ಮರಗಳನ್ನು ಕಡಿದು ಗೂಡಿನ ಕೆಳಗೆ ಬೆಂಕಿ ಹಾಕುವ ಮೂಲಕ ಅರಣ್ಯ ನಾಶ, ಆ ಗೂಡಿಂದ ಹೊರ ಬರುವ ಕಪ್ಪು ಹೊಗೆಯಿಂದ ವಾಯು ಮಾಲಿನ್ಯ, ಗೂಡಿನ ಶಾಖಕ್ಕೆ ಬಳಲಿ-ಬೆಂಡಾಗಿ ಕೆಲಸ ನಿರ್ವಹಿಸುವ ಅನಾರೋಗ್ಯ ಎಲ್ಲ
ಭಾಗ್ಯ’ವನ್ನು ಈ ಭಟ್ಟಿಗಳು ಕರುಣಿಸುತ್ತಿವೆ.
ಇಟ್ಟಂಗಿ ಭಟ್ಟಿಯಲ್ಲಿ ಕೆಲಸಕ್ಕೆ ತಡವಾಗಿ ಬಂದ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ ಖಂಡನಾರ್ಹವೇ. ಹಾಗೇ ಕಲ್ಯಾಣ ರಾಜ್ಯದ ಭರವಸೆ ನೀಡಿ ಬಂದ ಸರ್ಕಾರ ಹಾಗೂ ಕಾರ್ಮಿಕ ಮಂತ್ರಿ `ಇಂಥವರಿಗೇಕೆ ಇಲಾಖೆಯ ಒಂದಿನಿತೂ ಸೌಲಭ್ಯ ದೊರಕಿಲ್ಲ? ಯಾರು ಹೊಡೆದುಕೊಂಡರು ಇಂಥವರ ಸೌಲಭ್ಯಗಳನ್ನು? ದೋಷ ಎಲ್ಲಿದೆ’ ಎನ್ನುವುದನ್ನು ಪಕ್ಷ ರಾಜಕಾರಣ ಬದಿಗಿಟ್ಟು ತನಿಖೆ ನಡೆಸಲಿ. ಆಗಾದರೂ ನಿಜ ಕಾರ್ಮಿಕರಿಗೆ ಕಲ್ಯಾಣದ ಗಾಳಿ ಬೀಸೀತು… ಅಲ್ಲವೇ?