Home News ಕಾಂಗ್ರೆಸ್ ಸರ್ಕಾರ ನಮ್ಮ ನಾಡಿನ ರೈತರ ಪಾಲಿಗೆ ದೊಡ್ಡ ಶಾಪವಾಗಿದೆ

ಕಾಂಗ್ರೆಸ್ ಸರ್ಕಾರ ನಮ್ಮ ನಾಡಿನ ರೈತರ ಪಾಲಿಗೆ ದೊಡ್ಡ ಶಾಪವಾಗಿದೆ

ಚಿಕ್ಕಬಳ್ಳಾಪುರ: ಅನ್ನದಾತರ ಆಕ್ರೋಶ, ಆಕ್ರಂದನ, ಕಣ್ಣೀರು ಕಾಂಗ್ರೆಸ್ ಸರ್ಕಾರಕ್ಕೆ ಶಪವಾಗಿ ತಟ್ಟುವ ದಿನ ಬಹಳ ದೂರವಿಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಸುಧಾಕರ್ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಘಟಕ ಹಾಗೂ ರೈತ ಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರೈತರ ಪ್ರತಿಭಟನೆ ಅಂಗವಾಗಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಶಿಡ್ಲಘಟ್ಟ ವೃತ್ತದವರೆಗೆ ನಡೆದ ಮೆರವಣಿಗೆ ನಡೆಯಿತು. ಈ ವೇಳೆ ಮಾತನಾಡಿರುವ ಅವರು “ಒಂದು ಕಡೆ ಬರ, ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ, ಇವೆರಡರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅದರಲ್ಲೂ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಯೋಜನೆಗಳನ್ನ ಕೂಡ ಕಸಿದುಕೊಳ್ಳುವ ಪಾಪದ ಕೆಲಸ ಮಾಡುತ್ತಿದೆ. ಇಂದಿನ ಪ್ರತಿಭಟನೆಯಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ರೈತ ಮುಖಂಡರುಗಳು, ರೈತ ಪರ ಸಂಘಟನೆಗಳ ಪ್ರತಿನಿಧಿಗಳು, ಯುವಕರು ಹಾಗೂ ಅವರು ಸರ್ಕಾರದ ವಿರುದ್ಧ ವ್ಯಕ್ತಪಡಿಸಿದ ಆಕ್ರೋಶ, ಅಸಮಾಧಾನ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಕನ್ನಡಿ ಹಿಡಿದಂತಿತ್ತು. ಅಧಿಕಾರಕ್ಕೆ ಬಂದ ಕೇವಲ ಐದು ತಿಂಗಳಿನಲ್ಲೇ ಕಾಂಗ್ರೆಸ್ ಸರ್ಕಾರ ನಮ್ಮ ನಾಡಿನ ರೈತರ ಪಾಲಿಗೆ ದೊಡ್ಡ ಶಾಪವಾಗಿದೆ. ಅನ್ನದಾತರ ಆಕ್ರೋಶ, ಆಕ್ರಂದನ, ಕಣ್ಣೀರು ಕಾಂಗ್ರೆಸ್ ಸರ್ಕಾರಕ್ಕೆ ಶಪವಾಗಿ ತಟ್ಟುವ ದಿನ ಬಹಳ ದೂರವಿಲ್ಲ. ಈಗಲಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ರೈತರ ಬಗ್ಗೆ ಗಮನ ಹರಿಸಲಿ, ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಲಿ” ಎಂದರು

Exit mobile version