Home ನಮ್ಮ ಜಿಲ್ಲೆ ದಾವಣಗೆರೆ ಏಳನೇ ವೇತನ ಆಯೋಗ ಸಮಿತಿ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಏಳನೇ ವೇತನ ಆಯೋಗ ಸಮಿತಿ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

0

ದಾವಣಗೆರೆ: ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗದ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೊನ್ನಾಳಿಗೆ ತೆರಳುವ ಪೂರ್ವದಲ್ಲಿ ನಗರದ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳನೇ ವೇತನ ಜಾರಿ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಈಗ ಸುಧಾಕರ್ ರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದರು.
ಬೆಂಗಳೂರಿನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ ಹರಿದು ಬಂದಿರುವ ಬಂಡವಾಳದಲ್ಲಿ ಶೇ.80ರಷ್ಟು ಅಂದರೆ ಬೆಂಗಳೂರು ಹೊರಗಡೆ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಹುಮ್ನಾಬಾದ್, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ 13 ರಿಂದ 14 ಜಿಲ್ಲೆಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ವಿಕಿಪೀಡಿಯ ಆಧರಿಸಿ ಹಿಂದು ಎಂದರೆ ಅಶ್ಲೀಲ ಪದ ಎಂದು ಹೇಳಿಕೆ ನೀಡಿದ್ದಾರೆ. ವಿಕಿಪೀಡಿಯ ಎಷ್ಟು ವಿಶ್ವಾಸಾರ್ಹತೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಮುಖ್ಯಸ್ಥರ ವಿರುದ್ಧ ಸಾಕಷ್ಟು ಕೇಸ್ ಗಳು ಆಗಿ ಜೈಲಿಗೆ ಹೋಗಿ ಬಂದಿದ್ದಾರೆ. ಅಂತಹ ವಿಕಿಪೀಡಿಯ ಆಧರಿಸಿ ಸತೀಶ್ ಜಾರಕಿಹೊಳಿಯವರು ಹೇಳಿಕೆ ನೀಡಿ ಹಿಂದೂಗಳ ಮನಸ್ಸಿನಲ್ಲಿ ಘಾಸಿ ಉಂಟು ಮಾಡಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ಪಕ್ಷದ ಸಭೆಯಲ್ಲಿ ಆ ಹೇಳಿಕೆ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಜಾರಕಿಹೊಳಿಯವರು ಬಹಿರಂಗವಾಗಿಯೇ ಹಿಂದೂ ಎಂದರೆ ಅಶ್ಲೀಲ ಪದ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ಸ್ಪಷ್ಟನೆ ನೀಡಬೇಕು. ಸಣ್ಣಪುಟ ವಿಚಾರಗಳಿಗೆ ಹೇಳಿಕೆ ನೀಡುವಂತಹ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿಯವರ ಹೇಳಿಕೆ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ನನ್ನ ಮುಂದೆ ಅಂತಹ ಪ್ರಸ್ತಾವನೆಯೇ ಇಲ್ಲ ಎಂದು ಹೇಳುವ ಮೂಲಕ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸಿರಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಸಿಎಂ ತೆರೆ ಎಳೆದರು.
ನಗರಾಭಿವೃದ್ಧಿ ಖಾತೆ ಹೊಂದಿರುವ ಸಚಿವ ಭೈರತಿ ಬಸವರಾಜ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಕುರಿತಂತೆ ಕೇಳಲಾದ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಸಿಎಂ, ಚುನಾವಣೆಗಳು ಬಂದಾಗ ವಿರೋಧ ಪಕ್ಷಗಳು ಈ ರೀತಿಯ ಆರೋಪ ಮಾಡುವುದು ರೂಢಿ. ಈ ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಆಡಿಯೋ ಮತ್ತು ಬಂಧಿತರ ಹೇಳಿಕೆಯ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಯಾರು ತಪ್ಪಿತಸ್ಥರು ಎಂಬುದು ಹೊರ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಎಸ್.ವಿ.ರಾಮಚಂದ್ರ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

ಏಳನೇ ವೇತನ ಆಯೋಗ ಸಮಿತಿ ರಚನೆ ಬೊಮ್ಮಾಯಿ

Exit mobile version