ದಾವಣಗೆರೆ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ರಸ್ತೆ ದುರಸ್ತಿ ಗೊಳಿಸುವಂತೆ ಒತ್ತಾಯಿಸಿ 6 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ಎದುರು ಏಕಾಂಗಿ ಧರಣಿ ನಡೆಸಿರುವ ಘಟನೆ ನಡೆದಿದೆ.
ಗ್ರಾಮದ ಪಿ.ಎಚ್. ಬಾಬು ಹಾಗೂ ಎನ್.ಉಮಾ ದಂಪತಿ ಪುತ್ರಿ ಪಿ.ಬಿ. ಸುಶ್ಮಿತಾ ಏಕಾಂಗಿ ಧರಣಿ ನಡೆಸಿದ ವಿದ್ಯಾರ್ಥಿನಿ. ಶಾಲೆಗೆ ಸಂಪರ್ಕ ಕಲ್ಪಿಸಿದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದುರಸ್ತಿ ಮಾಡುವಂತೆ ಒತ್ತಾಯಿಸಿ ‘ಮೂಲ ಸೌಕರ್ಯಕ್ಕಾಗಿ ಹೋರಾಟ’ ಎಂಬ ಭಿತ್ತಿ ಚಿತ್ರವನ್ನು ಕುರ್ಚಿಯೊಂದಕ್ಕೆ ಕಟ್ಟಿ ನೆಲದ ಮೇಲೆ ವಿದ್ಯಾರ್ಥಿನಿ ಧರಣಿ ನಡೆಸಿದಳು.
ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿದ್ದು, ಗ್ರಾಮಸ್ಥರು ತೊಂದರೆಗೊಳಗಾಗಿದ್ದಾರೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚರಂಡಿಗಳಲ್ಲಿ ಹೂಳು ತುಂಬಿಕೊAಡು ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ, ಬೀದಿದೀಪಗಳು ಸರಿಯಿಲ್ಲದೇ ರಾತ್ರಿ ಸಂಚಾರ ಭಯದಿಂದ ಕೂಡಿರುತ್ತದೆ ಎಂದು ಅಸಮಾಧಾನ ಹೊರಹಾಕಿದಳು.
ಶಾಲೆಗೆ ಸಂಪರ್ಕ ಕಲ್ಪಿಸಿದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಸಹಪಾಠಿಗಳು ಹಾಗೂ ಶಿಕ್ಷಕರು ಆಯತಪ್ಪಿ ಬಿದ್ದ ನಿದರ್ಶನಗಳಿವೆ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿನಿ ಒತ್ತಾಯಿಸಿದಳು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಧರಣಿ ಸ್ಥಳಕ್ಕೆ ಧಾವಿಸಿ ಪುತ್ರಿಯ ಮನವೊಲಿಸಲು ಪ್ರಯತ್ನಿಸಿದರು. ಮಧ್ಯಾಹ್ನದ ಹೊತ್ತಿಗೆ ಚರಂಡಿಯಲ್ಲಿ ಹೂಳು ತೆಗೆಯುವ ಕಾರ್ಯ ಆರಂಭವಾಗಿದ್ದು, ವಿದ್ಯಾರ್ಥಿನಿ ಧರಣಿ ಕೈಬಿಟ್ಟಿದ್ದಾಳೆ.