Home ತಾಜಾ ಸುದ್ದಿ ಅಭಿವೃದ್ಧಿಯಲ್ಲಿ ಭಾರತ ವಿಶ್ವದ ಮೊದಲ ಸ್ಥಾನಕ್ಕೇರಲಿದೆ

ಅಭಿವೃದ್ಧಿಯಲ್ಲಿ ಭಾರತ ವಿಶ್ವದ ಮೊದಲ ಸ್ಥಾನಕ್ಕೇರಲಿದೆ

0

ದಾವಣಗೆರೆ: 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದ್ದು, ಈಗಾಗಲೇ ಯುನೈಟೆಡ್ ಕಿಂಗ್ ಡಂ ದೇಶಕ್ಕಿಂತ ಮುಂದೆ ಸಾಗಿದ್ದೇವೆ. ಇನ್ನೆರಡು ವರ್ಷದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಜರ್ಮನಿ ಹಾಗೂ ಮೂರುವರೆ ವರ್ಷಗಳಲ್ಲಿ ಮೂರನೇ ಸ್ಥಾನದಲ್ಲಿರುವ ಜಪಾನ್ ದೇಶವನ್ನು ಭಾರತ ಹಿಂದಕ್ಕೆ ಹಾಕಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆ, ಕಮ್ಯುನಿಕೇಷನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಥಿಂಕರ್ಸ್ ಫೋರಂ ವತಿಯಿಂದ ನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಅಭಿವೃದ್ಧಿ ಹೊಂದಿದ ಭಾರತ ಸಾಗಿದ ದಾರಿ’ ವಿಷಯ ಕುರಿತು ಅವರು ಮಾತನಾಡಿದರು. ಇಂದು ಜಗತ್ತು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ. ಶತಮಾನಕ್ಕೊಮ್ಮೆ ಬರಬಹುದಾದ ಸಾಂಕ್ರಾಮಿಕ ರೋಗದಿಂದ ಎಲ್ಲ ದೇಶಗಳ ಆರ್ಥಿಕ ಸ್ಥಿತಿಗೆ ಹಿನ್ನಡೆಯಾಗಿದೆ. ವಿಕೋಪಕ್ಕೆ ಆರ್ಥಿಕತೆ ದೃಷ್ಟಿಯಿಂದ ಹೇಗೆ ಪ್ರತಿಕ್ರಿಸಬೇಕು ಎಂಬುದು ಬೇರೆ ರಾಷ್ಟ್ರಗಳಿಗೆ ಗೊತ್ತಾಗಲಿಲ್ಲ. ಸೀಮಿತ ಬಂಡವಾಳವನ್ನು ಅಚ್ಚುಕಟ್ಟಾಗಿ ಬಳಸುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿ ಆಗಿದ್ದು ಆ ಕೆಲಸವನ್ನು ಮೋದಿ ಸಮರ್ಥವಾಗಿ ನಿಭಾಯಿಸಿದರು ಎಂದು ಪ್ರಶಂಸಿಸಿದರು.
ಸಾಂಕ್ರಾಮಿಕ ರೋಗದಿಂದ ಜಗತ್ತಿನ ಆರ್ಥಿಕತೆ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಶೇ1ರಷ್ಟಿದ್ದ ಹಣದುಬ್ಬರ ಪ್ರಮಾಣ ಇಂದು ಶೇ.15ಕ್ಕೆ ಏರಿಕೆ ಆಗಿದೆ. ಅಭಿವೃದ್ಧಿ ದರವು ಶೇ.0.1ರಿಂದ ಶೇ.0.9ಕ್ಕೆ ಕುಸಿದಿದೆ. ಇದನ್ನು ತಡೆಯಲು ಸಾಧ್ಯವಿತ್ತೇ ಎಂಬ ಪ್ರಶ್ನೆಗೆ ಭಾರತವು ಉದಾಹರಣೆಯಾಗಿ ನಿಂತಿದೆ ಎಂದರು.
ಈ ಮೊದಲು 3.5 ಲಕ್ಷ ಕೋಟಿ ರೂ. ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿತ್ತು. ನರೇಂದ್ರ ಮೋದಿಯವರು 10 ಲಕ್ಷ ಕೋಟಿ ರೂ. ಬಾಕಿ ಬಂಡವಾಳವನ್ನು ವಿನಿಯೋಗಿಸಿದರು. ಭಾರತವು ಇಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ಆರ್ಥಿಕ ತಜ್ಞರ ಗಮನ ಸೆಳೆದಿದೆ. ನರೇಂದ್ರ ಮೋದಿಯಂತಹ ಸಮರ್ಥ ನಾಯಕನ ಜಾಣ್ಮೆ ನಿರ್ಧಾರದಿಂದ ಇದು ಸಾಧ್ಯವಾಗಿದೆ ಎಂದರು. ಪರ್ವತಪ್ಪ ಮೆಮೋರಿಯಲ್ ಟ್ರಸ್ಟಿನ ಡಾ.ನಾಗರಾಜ್, ಹಿರಿಯ ಲೆಕ್ಕ ಪರಿಶೋಧಕ ಬಸವರಾಜ ಒಡೆಯರ್ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತ ವಿಶ್ವದ ಗಮನಸೆಳೆದಿದೆ : ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ತೀರ್ಮಾನಗಳಿಂದಾಗಿ ಭಾರತ ಇಂದು ವಿಶ್ವದ ಗಮನ ಸೆಳೆಯುವಂತಾಗಿದೆ. ಮೊದಲಿಗೆ ಜನರು ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ 80 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಿದರು. ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ಸೇರಿದಂತೆ ಹೋಟೆಲ್, ಪ್ರವಾಸೋದ್ಯಮ, ಅಸಂಘಟಿತ ವಲಯಕ್ಕೆ 8 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದರು. ನಂತರ ಬಾಕಿ ಬಂಡವಾಳದಲ್ಲಿ ಹೂಡಿಕೆ ಮೇಲೆ ಗಮನ ಹರಿಸಿದರು. ಹೀಗಾಗಿ ಇಂದು ಭಾರತವು 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

Exit mobile version