Home ತಾಜಾ ಸುದ್ದಿ ಕೆ. ಎಸ್. ಈಶ್ವರಪ್ಪ, ಪುತ್ರನ ವಿರುದ್ಧ ಎಫ್‌ಐಆರ್‌

ಕೆ. ಎಸ್. ಈಶ್ವರಪ್ಪ, ಪುತ್ರನ ವಿರುದ್ಧ ಎಫ್‌ಐಆರ್‌

ಶಿವಮೊಗ್ಗ: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಮತ್ತು ಕುಟುಂಬ ಸದಸ್ಯರಿಗೆ ಅಕ್ರಮ ಆಸ್ತಿಗಳಿಕೆ ಪ್ರಕರಣದ ಉರುಳು ಸುತ್ತಿಕೊಂಡಿದೆ. ಲೋಕಸಭೆ ಚುನಾವಣೆ 2024ಕ್ಕೆ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಶ್ವರಪ್ಪರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಕೆ. ಎಸ್. ಈಶ್ವರಪ್ಪ, ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಸೊಸೆ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೂವರು ಸಹ ಈಗ ಲೋಕಾಯುಕ್ತ ಪೊಲೀಸರ ತನಿಖೆ ಎದುರಿಸಬೇಕಿದೆ.

ವಕೀಲ ವಿನೋದ್ ಸಲ್ಲಿಕೆ ಮಾಡಿದ್ದ ದೂರಿನ ಅನ್ವಯ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2/7/2025ರಂದು ಎಫ್‌ಐಆರ್‌ ದಾಖಲು ಮಾಡಲಾಗಿದೆ. ಕೆ. ಎಸ್. ಈಶ್ವರಪ್ಪ ಕುಟುಂಬ ಸದಸ್ಯರ ಜೊತೆ ಕೇರಳ ಪ್ರವಾಸದಲ್ಲಿದ್ದು, ಆಗಲೇ ಈ ಎಫ್‌ಐಆರ್‌ ಆಗಿದೆ.

ದಾಖಲೆ ಸಲ್ಲಿಕೆಗೆ ಸೂಚನೆ: ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದೂರುದಾರರಿಗೆ ಶುಕ್ರವಾರ ಠಾಣೆಗೆ ಹಾಜರಾಗಿ ಪ್ರಕರಣದ ತನಿಖೆ ಸಂಬಂಧ ದಾಖಲಾತಿ ಹಾಗೂ ಸಾಕ್ಷ್ಯಾಧಾರಗಳು ಒದಗಿಸುವ ಬಗ್ಗೆ ನೋಟಿಸ್ ನೀಡಿದ್ದಾರೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಕೆ. ಎಸ್‌. ಈಶ್ವರಪ್ಪ, ಕೆ. ಇ.ಕಾಂತೇಶ್ ಹಾಗೂ ಆರ್. ಶಾಲಿನಿ ವಿರುದ್ಧ ದೂರು ದಾಖಲಾಗಿದೆ.

ನ್ಯಾಯಾಲಯದ ಆದೇಶದಂತೆ ದಿನಾಂಕ 2-7-2025ರಂದು ಆಪಾದಿತರ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ನೀವು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಪ್ರಕರಣದ ದೂರಿಗೆ ಸಂಬಂಧಿಸಿದಂತೆ ದಾಖಲಾತಿಗಳು ಮತ್ತು ಸಾಕ್ಷ್ಯಾಧಾರಗಳ ಸಮೇತ ಹಾಜರಾಗಿ ತನಿಖೆಗೆ ಸಹಕರಿಸಲು ಸೂಚಿಸಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕೆ. ಎಸ್. ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಆದಾಯ ಮೀರಿ ಅಕ್ರಮ ಆಸ್ತಿಗಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ವಕೀಲ ವಿನೋದ್ ಖಾಸಗಿ ದೂರು ಸಲ್ಲಿಕೆ ಮಾಡಿದ್ದರು. ಈಗ ಕೋರ್ಟ್‌ ಆದೇಶದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಮೊದಲು ದೂರುದಾರ ವಿನೋದ್ ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ದೂರನ್ನು ಮರು ಪರಿಗಣಿಸಬೇಕು ಎಂದು ಆದೇಶವನ್ನು ನೀಡಿತ್ತು.

ಕೆ. ಎಸ್. ಈಶ್ವರಪ್ಪಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಟಿಕೆಟ್‌ ಅನ್ನು ಪುತ್ರ ಕಾಂತೇಶ್‌ಗೆ ನೀಡುವಂತೆ ಅವರು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದರು.

ಆದರೆ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡ ಈಶ್ವರಪ್ಪ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದ್ದರಿಂದ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿತ್ತು.

ಚುನಾವಣೆಯಲ್ಲಿ ಈಶ್ವರಪ್ಪಗೆ ತೀವ್ರ ಮುಖಭಂಗ ಉಂಟಾಗಿತ್ತು. ಅವರು ಕೇವಲ 30,050 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈಗ ಅವರು ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಈ ಅಕ್ರಮ ಆಸ್ತಿಗಳಿಕೆ ಪ್ರಕರಣದ ಎಫ್‌ಐಆರ್‌ ದಾಖಲಾಗಿದೆ.

Exit mobile version