ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಸೇರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ. ಸ್ವಾತಂತ್ರ್ಯ ದಿನಾಚರಣೆ-2025 ಅಂಗವಾಗಿ ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಿದೆ. ಆಗಸ್ಟ್ 7 ರಿಂದ 18ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ತೋಟಗಾರಿಕಾ ಇಲಾಖೆ ಈ ಬಾರಿ 218ನೇ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಿದೆ. ಈ ಬಾರಿಯ ಪ್ರಮುಖ ಆಕರ್ಷಣೆ ಹೂವಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪ್ರದರ್ಶನಗಳಾಗಿವೆ. ಸಸ್ಯಕಾಶಿಯಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗರಾದ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಇಬ್ಬರು ಹೋರಾಟಗಾರರ ಜೀವನವನ್ನು ಹೂ ಮತ್ತು ಗಿಡಗಳಲ್ಲಿ ಕಟ್ಟಿಕೊಡಲಾಗುತ್ತದೆ.
ಪ್ರವೇಶ ದರ ಎಷ್ಟು?: ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಆಗಸ್ಟ್ 7 ರಿಂದ 18ರ ತನಕ ನಡೆಯಲಿದೆ. ಲಾಲ್ ಬಾಗ್‌ಗೆ ನಮ್ಮ ಮೆಟ್ರೋ ಸಂಪರ್ಕ ಇರುವ ಕಾರಣ ಹೆಚ್ಚು ಜನರು ಆಗಮಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ತೋಟಗಾರಿಕಾ ಇಲಾಖೆ ಈ ಬಾರಿ 11 ಲಕ್ಷ ಜನರು ಆಗಮಿಸಲಿದ್ದಾರೆ ಎಂದು ಅಂದಾಜಿಸಿದೆ.
ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜೀವನವನ್ನು ಹೂ, ಗಿಡಗಳಲ್ಲಿ ಕಟ್ಟಿಕೊಡಲಾಗುತ್ತದೆ. ಇದು ಫಲಪುಷ್ಪ ಪ್ರದರ್ಶನ ನೋಡಲು ಬರುವ ಜನರಿಗೆ ವಿಶೇಷ ಅನುಭವ ನೀಡಲಿದೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಲಾಲ್ ಬಾಗ್ ಜಂಟಿ ನಿರ್ದೇಶಕ ಎಂ. ಜಗದೀಶ್ ಮಾಹಿತಿ ನೀಡಿದ್ದಾರೆ.
ಲಾಲ್ ಬಾಗ್ ಪ್ರವೇಶ ಶುಲ್ಕಗಳು ಎಂದಿನಂತೆ ಇರಲಿವೆ. ಲಾಲ್ ಬಾಗ್ ಸುತ್ತಲಿನ ಸಂಚಾರ ವ್ಯವಸ್ಥೆಯಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಕೆಲವು ಬದಲಾವಣೆಗಳನ್ನು ಮಾಡಲಿದ್ದಾರೆ. ನಮ್ಮ ಮೆಟ್ರೋ ಸಹ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ದರದ ಟಿಕೆಟ್‌ಗಳ ವ್ಯವಸ್ಥೆ ಮಾಡಲಿದೆ.
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಸ್ವಾತಂತ್ರ್ಯೋತ್ಸವ, ಗಣರಾಜೋತ್ಸವದ ಅಂಗವಾಗಿ ನಡೆಯುತ್ತದೆ. ಬೆಂಗಳೂರು ನಗರದಲ್ಲಿ ಕರಗ, ಕಡಲೆಕಾಯಿ ಪರಿಷೆ ಬಿಟ್ಟರೆ ಲಕ್ಷಾಂತರ ಜನರು ಸೇರುವ ಪ್ರಮುಖ ಕಾರ್ಯಕ್ರಮದಲ್ಲಿ ಫಲಪುಷ್ಪ ಪ್ರದರ್ಶನ ಸಹ ಒಂದಾಗಿದೆ.
ಶಾಲಾ ವಿದ್ಯಾರ್ಥಿಗಳು ಗುರುತಿನ ಚೀಟಿ ತೋರಿಸಿ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಪ್ರತಿವರ್ಷ ಅವಕಾಶವನ್ನು ಕಲ್ಪಿಸಲಾಗುತ್ತದೆ. ವಾರಾಂತ್ಯದಲ್ಲಿ ಮತ್ತು ರಜೆ ದಿನಗಳಲ್ಲಿ ಹೆಚ್ಚು ಜನರು ಲಾಲ್ ಬಾಗ್‌ಗೆ ಆಗಮಿಸಲಿದ್ದು, ಅಗತ್ಯ ವ್ಯವಸ್ಥೆಯನ್ನು ಮಾಡಲಾಗುತ್ತದೆ.