ಮಂಗಳೂರು: ರೈಲ್ವೆ ಹಳಿಗೆ ದೊಡ್ಡ ಗಾತ್ರದ ಮರ ಬಿದ್ದದ್ದನ್ನು ಗಮನಿಸಿದ 70 ವರ್ಷದ ವೃದ್ಧೆಯೊಬ್ಬರು ಕೆಂಪು ವಸ್ತ್ರ ಪ್ರದರ್ಶಿಸಿ ರೈಲು ತಡೆಯುವ ಮೂಲಕ ಸಮಯಪ್ರಜ್ಞೆ ತೋರಿಸಿದ್ದಾರೆ. ಈ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಮಂಗಳೂರಿನ ಪಡೀಲ್ ಜೋಕಟ್ಟೆ ಮಧ್ಯೆ ಇರುವ ಪಚ್ಚನಾಡಿ ಸಮೀಪದ ಮಂದಾರದಲ್ಲಿ ಮಾರ್ಚ್ 21ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ನಗರದ ಕುಡುಪು ಆಯರ ಮನೆ ಚಂದ್ರಾವತಿ ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದವರು.
ಮಾರ್ಚ್ 21ರಂದು ಮಧ್ಯಾಹ್ನ 2.10ರ ಸುಮಾರಿಗೆ ರೈಲ್ವೆ ಹಳಿಗೆ ಮರ ಉರುಳಿತ್ತು. ಅದೇ ಸಂದರ್ಭದಲ್ಲಿ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಚಲಿಸುತಿತ್ತು. ಇದನ್ನು ಗಮನಿಸಿದ ಚಂದ್ರಾವತಿ ಅವರು ಮನೆಯಲ್ಲಿದ್ದ ಕೆಂಪು ಬಟ್ಟೆಯನ್ನು ತಂದು ರೈಲು ಬರುವ ಸಮಯದ ವೇಳೆ ಪ್ರದರ್ಶಿಸಿದ್ದಾರೆ. ಅಪಾಯವನ್ನು ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲು ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೆ ಇಲಾಖೆಯ ಕಾರ್ಮಿಕರು ಸೇರಿ ರೈಲು ಹಳಿ ಮೇಲೆ ಬಿದ್ದಿದ್ದ ಮರವನ್ನು ತೆರವು ಮಾಡಿದ್ದಾರೆ.
‘ಮಧ್ಯಾಹ್ನ ಊಟ ಮಾಡಿ ಮನೆಯ ಅಂಗಳದಲ್ಲಿ ಕುಳಿತಿದ್ದೆ. ನನ್ನ ಅಕ್ಕ ಮನೆಯಲ್ಲಿ ನಿದ್ರೆಗೆ ಜಾರಿದ್ದರು. ಅದೇ ವೇಳೆ ಮನೆ ಎದುರಿನ ರೈಲು ಹಳಿಗೆ ಬೃಹದ್ದಾಕಾರದ ಮರವೊಂದು ಹಳಿ ಮೇಲೆ ಬಿದ್ದಿದ್ದು ಕಂಡಿತು. ಎಂದಿನಂತೆ ಆ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ರೈಲು ಸಂಚರಿಸುವ ಬಗ್ಗೆ ನನಗೆ ಮಾಹಿತಿ ಇತ್ತು. ಏನು ಮಾಡಬೇಕು ಎಂದು ತೋಚಲಿಲ್ಲ.
ಯಾರಿಗಾದರೂ ಕರೆ ಮಾಡಿ ತಿಳಿಸಬೇಕು ಎಂದು ಮನೆ ಒಳಗಡೆ ಹೋಗಬೇಕು ಅನ್ನುವಷ್ಟರಲ್ಲೆ ರೈಲಿನ ಹಾರ್ನ್ ಶಬ್ದ ಕೇಳಿಸಿದೆ. ಕೂಡಲೇ ಅಲ್ಲೇ ಕೆಂಪು ಬಟ್ಟೆ ಕಂಡಿದ್ದು, ಅದನ್ನೇ ಹಿಡಿದು ಹಳಿಯ ಬಳಿಗೆ ಓಡಿ ಹೋದೆ. ನನಗೆ ಹೃದಯದ ಆಪರೇಷನ್ ಆಗಿದೆ. ಆದರೂ ಅದನ್ನು ಲೆಕ್ಕಿಸದೇ ಓಡಿ ರೈಲು ನಿಲ್ಲಿಸಿದೆ. ಸುಮಾರು ಅರ್ಧ ತಾಸು ರೈಲು ಹಳಿ ಮೇಲೆ ನಿಂತಿತ್ತು. ಸ್ಥಳೀಯರ ಸಹಕಾರದಿಂದ ಬಳಿಕ ಮರ ತೆರವು ಮಾಡಲಾಯಿತು” ಎಂದು ಚಂದ್ರಾವತಿ ಹೇಳಿದ್ದಾರೆ. ಇನ್ನು ಚಂದ್ರಾವತಿ ಅವರ ಕಾರ್ಯಕ್ಕೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.
