Home ತಾಜಾ ಸುದ್ದಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಇಂಗ್ಲಿಷ್ ಮೇಡಂ

ಜಿಲ್ಲಾಧಿಕಾರಿ ದಿವ್ಯಾ ಪ್ರಭು ಇಂಗ್ಲಿಷ್ ಮೇಡಂ

0

ಧಾರವಾಡ: ಅಬ್ಬಾ ಏನ್ ಚೆನ್ನಾಗಿದೆಯಲ್ಲಮ್ಮ ನಿಮ್ಮ ಶಾಲೆ… ನಿನ್ನ ಹೆಸರು ಏನಮ್ಮ… ಯಾವ ವಿಷಯ ನಿಮಗೆ ಇಷ್ಟ… ಯಾವ ವಿಷಯ ನಿಮಗೆ ಕಠಿಣ….
ಹೀಗೆ ಶುಕ್ರವಾರ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರು ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡಿದ್ದಲ್ಲದೇ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಹಲವು ರಂಜನೀಯ ಸಂಗತಿಗಳನ್ನು ಹೇಳಿ ಶಾಲಾ ಮಕ್ಕಳ ಖುಷಿ ಹೆಚ್ಚಿಸಿದರು.
ಇಲ್ಲಿನ ಸರಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ೮ನೇ ತರಗತಿಗೆ ಬಂದು ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡರು. ಯಾವ ವಿಷಯ ಕಠಿಣವಾಗಿದೆ ಎಂದು ಅವರು ಕೇಳುತ್ತಿದ್ದಂತೆಯೇ ಹೆಚ್ಚಿನ ವಿದ್ಯಾರ್ಥಿಗಳು `ಇಂಗ್ಲಿಷ್’ ಬಹಳ ಕಠಿಣ. ಸುಲಭವಾಗಿ ಅರ್ಥವಾಗುವುದಿಲ್ಲ ಎಂದರು.
ಕೂಡಲೇ ಇಂಗ್ಲಿಷ್ ಪುಸ್ತಕ ಪಡೆದುಕೊಂಡ ದಿವ್ಯಾ ಪ್ರಭು, ಇಂಗ್ಲಿಷ್ ಕಠಿಣ ಎಂಬ ಮನೋಭಾವ ಬೇಡ. ಅದನ್ನು ಒಂದು ಭಾಷೆಯಾಗಿ ಕಲಿಯಬೇಕು. ಇಂಗ್ಲಿಷ್ ಕಲಿಯಬೇಕೆಂದರೆ ನಮಗೆ ಬಂದಷ್ಟು ಇಂಗ್ಲಿಷ್ ಮಾತನಾಡಬೇಕು. ಆಗ ಮಾತ್ರ ಇಂಗ್ಲಿಷ್ ಭಾಷೆಯ ಹಿಡಿತ ಸಿಗುತ್ತದೆ. ತಪ್ಪಾಗುತ್ತದೆ, ಮಾತನಾಡಲು ಕಠಿಣವಾಗುತ್ತದೆ ಎಂದು ಇಂಗ್ಲಿಷ್ ವಿಷಯದಿಂದ ದೂರ ಉಳಿಯಬಾರದು ಎಂದು ಹೇಳಿದ ದಿವ್ಯಾ ಪ್ರಭು ಇಂಗ್ಲಿಷ್ ಭಾಷೆ ವಿಶೇಷತೆಯನ್ನು ಸ್ವಾರಸ್ಯಕರವಾಗಿ ತಿಳಿಸಿಕೊಟ್ಟರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೂ ಹೂಹಾಕಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಡಿಡಿಪಿಐ ಎಸ್.ಎಸ್. ಕೆಳದಿಮಠ, ಶಾಲಾ ಸಿಬ್ಬಂದಿ ಇದ್ದರು.

Exit mobile version