ಮಂಗಳೂರು: ಹೊಸ ಸರ್ಕಾರ ಬಂದ ಮೇಲೆ ರಾಜ್ಯದ ಖಜಾನೆನೇ ಲಾಕ್ ಆಗಿದೆ. ಯಾವುದೇ ಅಧಿಕಾರಿಗಳನ್ನು ಕೇಳಿದರೂ ಮುಂದಿನ ತಿಂಗಳಲ್ಲಿ ಪೂರಕ ಬಜೆಟ್ ಮಂಡನೆಯಾದ ಬಳಿಕವಷ್ಟೇ ಟೆಂಡರ್ ಆಗಿರುವ ಕಾಮಗಾರಿಗಳಿಗೆ ಅನುದಾಗಳನ್ನು ಬಿಡುಗಡೆ ಮಾಡಲು ಸಾಧ್ಯ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ಶಿವಮೊಗ್ಗ-ಬೈಂದೂರು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ತಮ್ಮ ಕೆಲಸದ ಬಿಲ್ ಪಾವತಿಯಾಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ ಸರ್ಕಾರ ಬಿಲ್ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕೆಂದರು.
ಪ್ರತೀ ವರ್ಷ ಪ್ರವಾಹ ಬಂದಾಗ ಮರವಂತೆ ಅತೀ ಹೆಚ್ಚು ಹಾನಿಗೊಳಗಾಗುತ್ತದೆ. ಇದನ್ನು ಗಮನಿಸಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ 82 ಕೋಟಿ ಅನುದಾನವನ್ನು ತಡೆಗೋಡೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದರು. ಅದರಂತೆ ಈಗಾಗಲೇ ಟೆಂಡರ್ ಪ್ರೋಸೆಸ್ ಆಗಿದೆ. ಆದರೆ ಸಿಆರ್ಝೆಡ್ ಝೋನ್ ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ತಡವಾಗಿದೆ ಎಂದ ಅವರು, ಈ ಬಗ್ಗೆ ಸರ್ಕಾರ ಹಾಗೂ ಸಚಿವರ ಜೊತೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಗಂಗೊಳ್ಳಿ ಬಂದರು ಜೆಟ್ಟಿ ಸಮಸ್ಯೆಗೆ ಸಂಬಂಧಿಸಿ ನಾಲ್ಕು ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಪತಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದ ಬಿ.ವೈ.ಆರ್, ಈ ಬಗ್ಗೆ ಶಾಸಕರು ಹಾಗೂ ನಾನು ವೈಯುಕ್ತಿಕವಾಗಿ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದರು.