ಹುಬ್ಬಳ್ಳಿ : ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರೊಬ್ಬರು ರೈಲಿನಿಂದ ಕೆಳಗಡೆ ಬೀಳಿಸಿಕೊಂಡಿದ್ದ ಸೂಟ್ ಕೇಸ್ ನ್ನು ರೈಲ್ವೆ ರಕ್ಷಣಾ ದಳ ಪೊಲೀಸರು ಪತ್ತೆ ಮಾಡಿ ಸಂಬಂಧಪಟ್ಟ ಪ್ರಯಾಣಿಕರಿಗೆ ಸೂಟ್ ಕೇಸ್ ಹಸ್ತಾಂತರಿಸಿದ್ದಾರೆ.
ಬಾಗಲಕೋಟೆಯ ನಿವಾಸಿ ಮೋಹನದಾಸ್ ಅವರು ಜುಲೈ 11 ರಂದು ಮೈಸೂರ- ಸೋಲಾಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಾಗಲಕೋಟ- ಗುಳೇದಗುಡ್ಡ ರೈಲ್ವೆ ನಿಲ್ದಾಣ ಮಾರ್ಗದಲ್ಲಿ ಸೂಟ್ ಕೇಸ್ ನ್ನು ರೈಲಿನಿಂದ ಬೀಳಿಸಿಕೊಂಡಿದ್ದರು. ಬಳಿಕ ಬಾಗಲಕೋಟೆ ರೈಲ್ವೆ ರಕ್ಷಣಾ ದಳ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬಾಗಲಕೋಟ – ಗುಳೇದಗುಡ್ಡ ಮಾರ್ಗದಲ್ಲಿ ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಪಕ್ಕ ಬಿದ್ದಿದ್ದ ಸೂಟ್ ಕೇಸ್ ಪತ್ತೆಯಾಗಿತ್ತು. ನಾಲ್ಕು ರೇಷ್ಮೆ ಸೀರೆ, ಸುಮಾರು 30 ಸಾವಿರ ರೂ ಮೊತ್ತದ ದಾಖಲೆಗಳು ಇದ್ದ ಸೂಟ್ ಕೇಸ್ನ್ನು ವಾರಸುದಾರರಾದ ಮೋಹನದಾಸ್ ಅವರಿಗೆ ಬಾಗಲಕೋಟೆ ಆರ್ ಪಿಎಫ್ ಪೊಲಿಸರು ಹಸ್ತಾಂತರಿಸಿದ್ದಾರೆ. ಬಾಗಲಕೋಟೆ ಆರ್ ಪಿಎಫ್ ಸಬ್ ಇನ್ ಸ್ಪೆಕ್ಟರ್ ಎಸ್.ಟಿ. ಬಾರ್ಕಿ, ಆರ್ ಪಿಎಫ್ ಕಾನ್ ಸ್ಟೇಬಲ್ ಎಂ.ಕೆ ವಾಲಿ ಅವರು ಸೂಟ್ ಕೇಸ್ ಪತ್ತೆ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಂಪರ್ಕಾಧಿಕಾರಿ ಅನೀಸ್ ಹೆಗಡೆ ತಿಳಿಸಿದ್ದಾರೆ.
