ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದು ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದು ವಿಶ್ವ ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ಸ್ಪೋಕೇನ್‌ನ ಸೊನೋರಾ ದೋಡ್ಸ್ ಅವರ ಶ್ರಮದಿಂದ 1910, ಜೂನ್ 19ರಂದು ತಂದೆಯ ದಿನಾಚರಣೆಯನ್ನು ಮೊದಲ ಬಾರಿಗೆ ಆಚರಿಸಿರುವುದಾಗಿ ಭಾವಿಸಲಾಗಿದೆ. 1909ರಲ್ಲಿ ಸ್ಪೋಕೇನ್‌ನ ಸೆಂಟ್ರಲ್ ಮೆತೊಡಿಸ್ಟ್ ಎಪಿಸ್ಕೊಪಲ್ ಚರ್ಚಿನ ಒಂದು ಭಾನುವಾರ ಮಾತೃ ದಿನದಾಚರಣೆಯ ಧರ್ಮೋಪದೇಶವನ್ನು ಆಲೈಸುತ್ತಾ ವಾಷಿಂಗ್ಟನ್‌ನ ಸೊನೋರಾ ಸ್ಮಾರ್ಟ್ ದೋಡ್ ತಂದೆಯನ್ನು ಗೌರವಿಸಲು ತಾನೇ ತಾನಾಗಿ ಯೋಚಿಸಿದಳು ಮತ್ತು 1910ರ ಜೂನ್ 19ರಂದು ತಂದೆಗೆ ಗೌರವವನ್ನು ಅರ್ಪಿಸಿದಳು. ಪಿತೃ ಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟ ಮೊದಲಿಗಳಾದಳು ಈಕೆ.
ಅಪ್ಪ – ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ. ಅಪ್ಪ ಅನ್ನುವ ಬಂಧವೇ ಅಂಥದ್ದು. ಅಪ್ಪ ಅಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖವೊಂದು ನೆನಪಾಗಬಹುದು, ಹಾಗೆಯೇ ಹೆಗಲಿಗೇರಿಸಿಕೊಂಡು ನಡೆದ ಜೀವವೊಂದು ಕಣ್ಣ ಮುಂದೆ ಸುಳಿದು ಹೋಗಬಹುದು. ಚಿಕ್ಕಂದಿನಲ್ಲಿ ಶಿಕ್ಷೆ ಕೊಡುವ, ಗದರುವ ಅಪ್ಪ , ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತನಾಗುತ್ತಾನೆ. ಆಧುನಿಕ ಅಪ್ಪಂದಿರು ಮಕ್ಕಳು ಸ್ನೇಹಿತರಂತೆ ಇರುವ ನಿದರ್ಶನಗಳೇ ಹೆಚ್ಚಾಗಿ ಕಾಣುತ್ತಿವೆ. ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು.